ಕೊಡಗು: ಎಣ್ಣೆಯ ಸಾಲದ ದುಡ್ಡು ವಾಪಸ್ಸು ಕೇಳಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ನ್ಯಾಷನಲ್ ವೈನ್ಸ್ ನ ಕ್ಯಾಷಿಯರ್ ಅಪ್ಪು ಎಂಬುವರ ಮೇಲೆ ಸೋಮವಾರ ಸಂಜೆ ಹಲ್ಲೆ ನಡೆದಿದೆ. ಗಾಳಿಬೀಡಿನ ಶರಣ್ ಎಂಬಾತನೇ ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿ.
ಬಾರ್ ಕ್ಯಾಷಿಯರ್ ಅಪ್ಪು ಎಂಬಾತನ ಪರಿಚಯದವನೇ ಆಗಿರುವ ಶರಣ್
ಮೂರು ದಿನಗಳ ಹಿಂದೆ ಸಾಲವಾಗಿ ಮದ್ಯ ಪಡೆದಿದ್ದ. ಸೋಮವಾರ ಪುನಃ ಮದ್ಯದ ಅಂಗಡಿಗೆ ಬಂದು ಸಾಲವಾಗಿ ಮದ್ಯ ಕೇಳಿದ್ದ. ಈ ವೇಳೆ ಅಪ್ಪು ಹಿಂದಿನ ಸಾಲವನ್ನು ಕೊಡು ಎಂದು ಕೇಳಿದ್ದ. ಮದ್ಯದ ಸಾಲದ ಹಣವನ್ನು ಕೇಳಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಅಪ್ಪು ಎಷ್ಟೇ ಪ್ರತಿರೋಧ ಒಡ್ಡಿದರೂ ಶರಣ್ ಮತ್ತೆ ಮತ್ತೆ ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ. ಚಾಕುವಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯ ಮದ್ಯದ ಅಂಗಡಿಯಲ್ಲೇ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,
ಚಾಕು ಇರಿತದಿಂದ ಗಾಯಗೊಂಡಿರುವ ಅಪ್ಪುಗೆ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ ಶರಣ್ ಗಾಗಿ ಮಡಿಕೇರಿ ನಗರ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



