ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿರಿಯ ನಾಗರಿಕರು ಸಮಾಜದ ದಾರಿದೀಪವಿದ್ದಂತೆ. ದೇಶದಲ್ಲಿರುವ ಅಂದಾಜು 25 ಕೋಟಿಯಷ್ಟು ಹಿರಿಯ ನಾಗರಿಕರಿಗೆ ಸರ್ಕಾರ ಘೋಷಿಸುವ ಯೋಜನೆ, ಸೌಲಭ್ಯಗಳು ಸಕಾಲಕ್ಕೆ ಅರ್ಹರಿಗೆ ಲಭಿಸುವಂತಾಗಬೇಕು ಎಂದು ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಹೇಳಿದರು.
ಅವರು ಮಂಗಳವಾರ ಪಟ್ಟಣದ ಬಾಳಿಕಾಯಿ ಅವರ ಜಿನ್ನಿಂಗ್ ಮಿಲ್ನಲ್ಲಿ ನಡೆದ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಮಾತನಾಡಿದರು.
ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 10 ಸಾವಿರ ರೂ ಗೌರವಧನ, ಉಚಿತ ರೈಲು, ಬಸ್ ಪ್ರಯಾಣಕ್ಕೆ ಅವಕಾಶ, ಆಸ್ಪತ್ರೆಯಲ್ಲಿ ಹಿರಿಯರಿಗೆ ಪ್ರತ್ಯೇಕ ಮತ್ತು ಪ್ರಥಮ ಆದ್ಯತೆ ನೀಡಬೇಕು. ಪೊಲೀಸ್ ಠಾಣೆಯಲ್ಲಿ ಸಾಂತ್ವನ ಕೇಂದ್ರ, ಸಮುದಾಯ ಭವನ ನಿರ್ಮಿಸಲು ಜಾಗದ ವ್ಯವಸ್ಥೆ, ಅಭಿವೃದ್ಧಿ ನಿಗಮ ಸೇರಿದಂತೆ ಹೆಚ್ಚಿನ ಸವಲತ್ತು ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಬೇಕು ಎಂದು ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿ.ಎಫ್. ಬೂದಿಹಾಳ, ಸಂಘದ ಉಪಾಧ್ಯಕ್ಷ ಚಂಬಣ್ಣ ಬಾಳಿಕಾಯಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಚನ್ನಪ್ಪ ಕೋಲಕಾರ, ನಾಗರಾಜ ಹೇಮಗಿರಿಮಠ, ಪ್ರಕಾಶ ಉಪನಾಳ, ಎಸ್.ಪಿ. ಸಭಾವಡೆಮಠ, ಎಮ್.ಕೆ. ಕಳ್ಳಿಮಠ, ಡಾ. ಶಿವಾನಂದ ಹೂವಿನ, ಚಂದ್ರಶೇಖರ ಹೂಗಾರ, ನಾಗರಾಜ ಪೂಜಾರ, ವಿ.ಸಿ. ರಬಕವಿ, ಎಸ್.ಬಿ. ತಾಳಿಕೋಟಿಮಠ, ಆಯ್.ಎಸ್. ಮಡಿವಾಳರ ಸೇರಿ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು, ಸದಸ್ಯರು ಇದ್ದರು. ಆಯ್.ಎಸ್. ಬಡಿಗೇರ ನಿರೂಪಿಸಿದರು.



