ಮುಂಬೈ: ದೊಡ್ಡ ನಾಯಕನನ್ನು ದ್ರೋಹಿ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ, ಆದ್ದರಿಂದ ಕಾಮ್ರಾ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ದೇವೇಂದ್ರ ಫಡ್ನವಿಸ್ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮ್ರಾ ಮಾಡಿದ್ದು ಕಾಮೆಡಿ ಅಲ್ಲ, ಶಿಂಧೆ ಅವರಿಗೆ ಮಾಡಿದ ಅವಮಾನ, ಅದಕ್ಕಾಗಿ ಅವರು ಕ್ಷಮೆ ಕೇಳಬೇಕು.
ಇಂತಹ ಅಪಮಾನಗಳನ್ನು ಸಹಿಸಲಾಗಲ್ಲ. ಕಳೆದ ಚುನಾವಣೆಗಳು ದೇಶದ್ರೋಹಿಗಳು ಯಾರೆಂಬುದನ್ನು ಸಾಬೀತು ಮಾಡಿವೆ. ಹೀಗಿದ್ದಾಗ ಅಂತಹ ದೊಡ್ಡ ನಾಯಕನನ್ನು ದ್ರೋಹಿ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ. ಕಾಮ್ರಾ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕುನಾಲ್ ಕಾಮ್ರಾ ಅವರು ರಾಹುಲ್ ಗಾಂಧಿ ತೋರಿಸಿದ ಅದೇ ಕೆಂಪು ಸಂವಿಧಾನದ ಪುಸ್ತಕವನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರೂ ಸಂವಿಧಾನ ಓದಿಲ್ಲ. ಸಂವಿಧಾನವು ನಮಗೆ ಮಾತನಾಡುವ ಸ್ವಾತಂತ್ರ್ಯ ನೀಡಿದೆ, ಆದರೆ ಅದಕ್ಕೆ ಮಿತಿಗಳಿವೆ.
ಈ ದೇಶದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿ ಮಾಡಲು ಸ್ವಾತಂತ್ರ್ಯವಿದೆ, ಹಕ್ಕಿದೆ. ಹಾಗಂತ ಓರ್ವ ಉಪಮುಖ್ಯಮಂತ್ರಿಗಳ ಮಾನಹಾನಿ ಮಾಡುವುದನ್ನು ಸಹಿಸಲ್ಲ. 2024ರ ಚುನಾವಣೆಯಲ್ಲೇ ಮಹಾರಾಷ್ಟ್ರದ ಜನ ʻದೇಶದ್ರೋಹಿʼ ಯಾರೆಂದು ನಿರ್ಧರಿಸಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ.