HomePolitics News500 ಕೋಟಿ ಕಿಕ್ ಬ್ಯಾಕ್ ಆರೋಪ: ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಯತ್ನ ಎಂದ ಸಿದ್ದರಾಮಯ್ಯ!

500 ಕೋಟಿ ಕಿಕ್ ಬ್ಯಾಕ್ ಆರೋಪ: ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಯತ್ನ ಎಂದ ಸಿದ್ದರಾಮಯ್ಯ!

For Dai;y Updates Join Our whatsapp Group

Spread the love

ಬೆಂಗಳೂರು:- ಮುಡಾ ಹಗರಣ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಗಣಿ ಗುತ್ತಿಗೆ ನವೀಕರಣ ವಿಷಯದಲ್ಲಿ ಸಿಎಂ 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬುವ ಆರೋಪ ಕೇಳಿ ಬಂದಿದ್ದು, ಸಿಎಂ ಕಿಕ್ ಬ್ಯಾಕ್ ಪಡೆದಿರುವ ಆರೋಪದ ಬಗ್ಗೆ ತನಿಖೆ ನಡೆಸಲು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ.

ಇದೇ ವಿಚಾರವಾಗಿ X ಮೂಲಕ ಸ್ಪಷ್ಟನೆ ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಇಂಥ ಆರೋಪಗಳಲ್ಲಿ ಹುರುಳಿಲ್ಲ. ಇದು ಹುರುಳಿಲ್ಲದ ಆರೋಪಗಳ ಮೂಲಕ ಜನರ ಮನಸಿನಲ್ಲಿ ವಿಷ ಬಿತ್ತುವ ಯತ್ನ ಎಂದು ತಿರುಗೇಟು ನೀಡಿದ್ದಾರೆ. ಇಂತಹ ಅಪ ಪ್ರಚಾರಗಳು ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ. ಕೆಲವು ದುಷ್ಟಶಕ್ತಿಗಳು ರಾಜಭವನವನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.

ದಿನಾಂಕ: 12.01.2015 ರಂದು ಕೇಂದ್ರ ಸರ್ಕಾರವು ಎಂಎಂಡಿಆರ್‌ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಯನ್ನು ತಂದ ಕಾರಣ ವಿವಿಧ ಹಂತದ ಪರಿಶೀಲನೆಗಳನ್ನು ನಡೆಸಿ, ದಿನಾಂಕ: 09.02.2015 ರಂದು ಗಣಿ ಗುತ್ತಿಗೆ ನವೀಕರಣಕ್ಕಾಗಿ ನೀಡಿದ್ದ ಷರತ್ತುಬದ್ಧ 8 ಕಂಪನಿಗಳ ತಾತ್ವಿಕ ಅನುಮತಿ ಪತ್ರಗಳು ಊರ್ಜಿತವಲ್ಲ ಎಂದು ತೀರ್ಮಾನಿಸಿ ಅವುಗಳನ್ನು ರದ್ದುಪಡಿಸಿ ತಿದ್ದುಪಡಿ ಕಾಯ್ದೆಯಂತೆ ಕ್ರಮವಹಿಸಲು ಸೂಚಿಸಲಾಯಿತು. ನಂತರ, ಗಣಿ ಇಲಾಖೆಯು ಸಲ್ಲಿಸಿದ ಡೀಮ್ಡ್‌ ಅವಧಿ ವಿಸ್ತರಣೆ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ರಾಜ್ಯ ಸರ್ಕಾರವು ಒಂದು ಪ್ರಕರಣವನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಡೀಮ್ಡ್‌ ಅವಧಿ ವಿಸ್ತರಣೆಗೆ ಪರಿಗಣಿಸದೆ ರದ್ದುಪಡಿಸಲಾಗಿದೆ. ಉಳಿದ 7 ಪ್ರಕರಣಗಳಿಗೆ ಶಾಸನಬದ್ಧವಾದ ಅರಣ್ಯ, ಪರಿಸರ ಮುಂತಾದ ತೀರುವಳಿ ಪತ್ರಗಳನ್ನು ಹಾಜರುಪಡಿಸುವ, ಬೇಬಾಕಿ ಪತ್ರ ಸಲ್ಲಿಸುವ ಹಾಗೂ ಸಿಬಿಐ, ಎಸ್‌ಐಟಿ ಸೇರಿದಂತೆ ವಿವಿಧ ಸಂಸ್ಥೆಗಳ ತನಿಖೆಯ ಅಂತಿಮ ವರದಿಯನ್ನು ಆಧರಿಸಿ ಸರ್ಕಾರದ ಕ್ರಮಕ್ಕೆ ಬದ್ಧರಾಗಲು ಷರತ್ತು ವಿಧಿಸಿ ಡೀಮ್ಡ್‌ ಅವಧಿ ವಿಸ್ತರಣೆ ಪತ್ರ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಈ 7 ಕಂಪನಿಗಳ ಪೈಕಿ 2 ಕಂಪನಿಗಳು ಶಾಸನಬದ್ಧವಾದ ತೀರುವಳಿಗಳನ್ನು ಸಲ್ಲಿಸದ ಕಾರಣ, ಯಾವುದೇ ಗಣಿಗಾರಿಕೆ ಹಕ್ಕುಗಳನ್ನು ನೀಡಿರುವುದಿಲ್ಲ. ಉಳಿದ 5 ಪ್ರಕರಣಗಳಲ್ಲಿ 3 ಪ್ರಕರಣಗಳನ್ನು ಬಿಜೆಪಿ ಆಡಳಿತದ ಅವಧಿಯಲ್ಲಿ ಅಂದರೆ 2020 ಹಾಗೂ 2021 ರಲ್ಲಿ ಗಣಿ ಗುತ್ತಿಗೆ ಹಕ್ಕನ್ನು ನೀಡಲಾಗಿದೆ. ಉಳಿದ ಎರಡು ಪ್ರಕರಣಗಳನ್ನು 2016 ಮತ್ತು 2018 ರಲ್ಲಿ ಪೂರಕ ಕರಾರು ಪತ್ರದ ಮುಖಾಂತರ ಷರತ್ತುಬದ್ಧ ಡೀಮ್ಡ್‌ ವಿಸ್ತರಣೆಯ ಗಣಿ ಗುತ್ತಿಗೆ ಹಕ್ಕನ್ನು ನೀಡಲಾಗಿದೆ. ಹಾಗಾಗಿ, ಈ ಎಲ್ಲಾ 8 ಪ್ರಕರಣಗಳಲ್ಲಿ ಸರ್ಕಾರಕ್ಕೆ ನಯಾಪೈಸೆಯಷ್ಟೂ ನಷ್ಟವಾಗಲಿಲ್ಲ. ಈ ಅವಧಿಯಲ್ಲಿ ಒಂದು ಹಿಡಿಯಷ್ಟೂ ಅದಿರು ತೆಗೆದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಕುರಿತಂತೆ ಈ ಹಿಂದೆ ಕೂಡ ವಿರೋಧ ಪಕ್ಷಗಳವರು ಹಾಗೂ ಕೆಲವು ವ್ಯಕ್ತಿಗಳು ಹಲವು ಸಂಸ್ಥೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಈ ದೂರುಗಳಲ್ಲಿ ಯಾವುದೇ ಹುರುಳಿಲ್ಲವೆಂದು ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ. ವಿರೋಧ ಪಕ್ಷಗಳವರು ಸದರಿ ವಿಚಾರವನ್ನು ಸದನದಲ್ಲೂ ಪ್ರಶ್ನಿಸಿದ್ದರು. ಈಗಿನ ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಮಂತ್ರಿಯಾಗಿರುವ ಕುಮಾರಸ್ವಾಮಿಯವರು ದಿನಾಂಕ: 14.01.2018 ರಂದು ಪತ್ರಿಕಾ ಗೋಷ್ಠಿಯನ್ನೂ ಮಾಡಿದರು. ಆದರೆ, ಈ ಯಾವುದೇ ಪ್ರಕರಣಗಳಲ್ಲಿ ಹುರುಳೆ ಇರಲಿಲ್ಲ. ಏಕೆಂದರೆ, ಈ ಎಲ್ಲಾ 8 ಪ್ರಕರಣಗಳನ್ನು ಹೊಸ ಸುಗ್ರೀವಾಜ್ಞೆಯ ನಿಯಮಾವಳಿಗಳಿಗೆ ಅನುಗುಣವಾಗಿ ಕ್ರಮವಹಿಸಲಾಗಿದೆ. ಅವಧಿ ಮುಗಿದ ಗಣಿ ಗುತ್ತಿಗೆಗಳನ್ನು ನಂತರ ನಿಯಮಾನುಸಾರ ಹರಾಜಿಗೆ ಒಳಪಡಿಸಿ ವಿಲೇವಾರಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹುರುಳಿಲ್ಲದ ವಿಷಯಕ್ಕೆ ವಿಷ ತುಂಬಿ ನಾಡಿನ ಜನರ ಮೆದುಳನ್ನು ಕಲುಷಿತಗೊಳಿಸಲು ಹೊರಟಿರುವ ದುಷ್ಟ ರಾಜಕೀಯ ಪಿತೂರಿಗಳನ್ನು ನಾಡಿನ ಪ್ರಜ್ಞಾವಂತ ಜನ ನಂಬಬಾರದು ಎಂದು ಮನವಿ ಮಾಡುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!