HomeGadag Newsಗುಳೇ ತಪ್ಪಿಸಲು ತಾಲೂಕು ಪಂಚಾಯಿತಿ ದಿಟ್ಟ ಹೆಜ್ಜೆ : ಚಂದ್ರಶೇಖರ ಬಿ.ಕಂದಕೂರ

ಗುಳೇ ತಪ್ಪಿಸಲು ತಾಲೂಕು ಪಂಚಾಯಿತಿ ದಿಟ್ಟ ಹೆಜ್ಜೆ : ಚಂದ್ರಶೇಖರ ಬಿ.ಕಂದಕೂರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ: ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿಕೊಂಡು ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಪಂಚಾಯಿತಿ ಮೇ 1ರಿಂದ ಒಂದು ತಿಂಗಳ ಕಾಲ (ನರೇಗಾ) ಯೋಜನೆಯಡಿ ‘ದುಡಿಯೋಣ ಬಾ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದನ್ನು ರೋಣ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ತಿಳಿಸಿದರು.

ತಾಲೂಕು ಸಭಾ ಭವನದಲ್ಲಿ ಗ್ರೂಪ್ ಟಾಕ್ ಮೂಲಕ ಮಾತನಾಡಿದ ಅವರು, ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲು ಪಂಚಾಯಿತಿ ವತಿಯಿಂದ ಸಿದ್ಧತೆ ಮಾಡಿಕೊಳ್ಳಿ. ಇದರಿಂದ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಗ್ರಾಮೀಣ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು `ದುಡಿಯೋಣ ಬಾ’ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ದುಡಿಯೋಣ ಬಾ ಅಭಿಯಾನದ ಕುರಿತು ಐಇಸಿ ಚಟುವಟಿಕೆಗಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಉದ್ಯೋಗ ಚೀಟಿ ಹೊಂದಿರದ ಕುಟುಂಬಗಳಿಂದ ಉದ್ಯೋಗ ಚೀಟಿಗಾಗಿ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆಯಬೇಕು. ನಿರುದ್ಯೋಗ, ಆರ್ಥಿಕ ಸಂಕಷ್ಟ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈ ಅಭಿಯಾನ ಆಶಾದಾಯಕವಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶದ ಅಕುಶಲ ಕರ್ಮಿಗಳಿಗೆ ಬೇಸಿಗೆಯಲ್ಲಿ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ನರೇಗಾ ಕೂಲಿ ದರವನ್ನು ಎಪ್ರಿಲ್ 1ರಿಂದ 370 ರೂ.ಗೆ ಹೆಚ್ಚಳ ಮಾಡಲಾಗಿದೆ. ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದ್ದು, ಬೇಸಿಗೆ ಅವಧಿಯಲ್ಲಿ 60 ದಿನಗಳ ಕೆಲಸ ನಿರ್ವಹಿಸಿದಲ್ಲಿ 22,200 ರೂ ರೈತರ ಖಾತೆಗೆ ಜಮಾ ಆಗಲಿದೆ. ರೈತರು ತಮ್ಮ ಜಮೀನುಗಳಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ, ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಮಗ್ರ ಕೆರೆ ಅಭಿವೃದ್ಧಿ ಕಾರ್ಯಕ್ರಮದಡಿ ಕಾಲುವೆಗಳ ಪುನಶ್ಚೇತನ, ಕೆರೆಗಳ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ತಿ, ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲು ಆದ್ಯತೆ ನೀಡಲಿದೆ. ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ತೋಟಗಾರಿಕೆ ಬೆಳೆ ಬೆಳೆಯಲು ಕಾಮಗಾರಿ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ತಾಲೂಕಿನ ಎಲ್ಲಾ ಪಿಡಿಓಗಳು, ಡಿಇಓಗಳು, ಇಂಜಿನಿಯರ್, ಬಿಎಫ್‌ಟಿ, ಜಿಕೆಎಂ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ನರೇಗಾ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ಒಟ್ಟು 29,467 ಜಾಬ್ ಕಾರ್ಡ್ಗಳಿದ್ದು, ಅದರಲ್ಲಿ 22,320 ಸಕ್ರಿಯವಾದ ಜಾಬ್ ಕಾರ್ಡ್ಗಳು ಇವೆ. ತಾಲೂಕಿನ ಒಟ್ಟು ಕೂಲಿ ಕಾರ್ಮಿಕರು 73,021. ಅದರಲ್ಲಿ ಸಕ್ರಿಯ ಕೂಲಿ ಕಾರ್ಮಿಕರು 48,523 ಜನ ಇದ್ದಾರೆ. ಸಕ್ರಿಯವಾಗಿ ಇರದೆ ಇರುವ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ತರುವ ಉದ್ದೇಶ ನಮ್ಮ ಮೇಲಿದೆ. ತಾಲೂಕಿನಲ್ಲಿ ಕೆಲಸ ನಿರ್ವಹಿಸುವ ಟಿಐಇಸಿ, ಜಿಕೆಎಂ, ಬಿಎಫ್‌ಟಿ, ಕಾಯಕ ಬಂಧು, ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಇವರನ್ನು ಕೆಲಸಕ್ಕೆ ತರುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಿ ಎಂದು ಚಂದ್ರಶೇಖರ ಬಿ. ಕಂದಕೂರ ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!