ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜಕ್ಕಾಗಿ ಬದುಕಿದವರನ್ನೇ ಇತಿಹಾಸ ಸ್ಮರಿಸುತ್ತದೆ. ತ್ಯಾಗವೇ ಮನುಷ್ಯನಿಗೆ ಅಮರತ್ವ ತಂದುಕೊಡುತ್ತದೆ. ಶಿಕ್ಷಣ ಸೇವೆ, ಸಮಾಜಮುಖಿ ಬದುಕು ಹಾಗೂ ಕೌಶಲ್ಯಾಧಾರಿತ ಶಿಕ್ಷಣವೇ ಯುವಜನರ ಭವಿಷ್ಯ ರೂಪಿಸುವ ಶಕ್ತಿಗಳಾಗಿದ್ದು, ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಕೌಶಲ್ಯವನ್ನೂ ಬೆಳೆಸಿಕೊಳ್ಳಬೇಕು ಎಂದು ಗದಗ ತೋಂಟದಾರ್ಯ ಮಠದ ಪೂಜ್ಯ ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.
ನಗರದ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಆಯೋಜಿಸಿದ್ದ 96ನೇ ಜಯಂತ್ಯುತ್ಸವ ಹಾಗೂ 12ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಡ ಮಕ್ಕಳ ಶಿಕ್ಷಣ ಹಾಗೂ ಸಮಾಜಸೇವೆಗೆ ತಮ್ಮ ಸಂಪೂರ್ಣ ಬದುಕನ್ನೇ ಸಮರ್ಪಿಸಿದ್ದ ಅಪರೂಪದ ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳು ತಮ್ಮ ವೇತನ ಹಾಗೂ ನಿವೃತ್ತಿಯ ನಂತರದ ಪಿಂಚಣಿಯನ್ನೂ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಿಯೋಗಿಸಿದ್ದು, ಅವರ ಆದರ್ಶ ಇಂದಿಗೂ ಆಶ್ರಮದ ಸೇವಾಕಾರ್ಯಗಳಲ್ಲಿ ಜೀವಂತವಾಗಿದೆ ಎಂದು ಹೇಳಿದರು.
ಆಶ್ರಮವು ಉಚಿತ ಶಿಕ್ಷಣ, ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಾಸದ ಮೂಲಕ ನೂರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುತ್ತಿದೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಕಾರ್ಯವೂ ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕೃಷ್ಣೇಗೌಡ ಪಾಟೀಲ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳಿಂದಲ್ಲ, ತಮ್ಮ ಕೌಶಲ್ಯದಿಂದ ಗುರುತಿಸಿಕೊಳ್ಳಬೇಕು. ಹೈಸ್ಕೂಲ್ ಹಂತವೇ ಭವಿಷ್ಯದ ಭದ್ರ ಅಡಿಪಾಯವಾಗಿದ್ದು, ಶಿಸ್ತು, ಪರಿಶ್ರಮ ಹಾಗೂ ಸ್ಪಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು ಎಂದರು.
ಡಿಗ್ರಿಗಿಂತ ಕೌಶಲ್ಯಕ್ಕೆ ಹೆಚ್ಚು ಮಹತ್ವ ದೊರೆಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸಮಸ್ಯೆ ಪರಿಹಾರ ಸಾಮರ್ಥ್ಯ, ತಾಂತ್ರಿಕ ಜ್ಞಾನ ಹಾಗೂ ಹೊಸ ಕೌಶಲ್ಯಗಳನ್ನು ನಿರಂತರವಾಗಿ ಕಲಿಯುವುದು ಅಗತ್ಯವಾಗಿದೆ ಎಂದು ತಿಳಿಸಿದರು. ‘ಐಸ್ ಕ್ಯೂಬ್ ಥಿಯರಿ’ ಉದಾಹರಿಸಿ, ಯಶಸ್ಸಿನ ಹಿಂದೆ ನಿರಂತರ ಪರಿಶ್ರಮ ಅಡಗಿರುತ್ತದೆ ಎಂದು ಹೇಳಿದರು.
ಆಶ್ರಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಜಿ.ಎನ್.ಟಿ.ಟಿ.ಎಫ್. ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಆಶ್ರಮದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಕಳೆದ 12 ವರ್ಷಗಳಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿಯೇ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಕಾಲೇಜು ಬ್ಯಾಗ್ನೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದರು.
ಆಶ್ರಮದಲ್ಲಿ ಟ್ಯೂಷನ್ ಪಡೆದ 70 ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪುರಸ್ಕಾರ ನೀಡಲಾಗಿದೆ. ಬೇಸಿಗೆ ರಜೆಯಲ್ಲಿ 8, 9 ಹಾಗೂ 10ನೇ ತರಗತಿಯ ಸುಮಾರು 700ರಿಂದ 800 ವಿದ್ಯಾರ್ಥಿಗಳಿಗೆ 12 ಶಿಕ್ಷಕರು ಉಚಿತ ಬೋಧನೆ ಮಾಡುತ್ತಿದ್ದಾರೆ. ಕಲಿಕೆಗೆ ಅತ್ಯಾಧುನಿಕ ಎರಡು ಡಿಜಿಟಲ್ ಬೋರ್ಡ್ಗಳನ್ನು ದಾನಿಗಳು ನೀಡಿದ್ದಾರೆ. ತೋಂಟದಾರ್ಯ ಶಿಕ್ಷಣ ಸಮಿತಿಯಲ್ಲಿ 10 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ದಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಆಶ್ರಮದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋಪಾಲ ಅಗರವಾಲ್, ಲಕ್ಷ್ಮಣ ಜೋಗದಂಡಕರ, ಸಂತೋಷ ಪುಣೇಕರ, ನೇಹಾ ಖಟವಟೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಆಂಜನೇಯ ಕಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ತುಮ್ಮರಮಟ್ಟಿ ನಿರೂಪಿಸಿದರು. ಶಿವಪ್ಪ ಕತ್ತಿ ವಂದಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು, ಪಾಲಕರು, ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ವಿದ್ಯಾರ್ಥಿಗಳು ಕೇವಲ ಅಂಕಗಳ ಬೆನ್ನಟ್ಟದೇ, ಜ್ಞಾನ, ಕೌಶಲ್ಯ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಂಡಾಗ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ.”
– ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ



