ವಿಜಯಸಾಕ್ಷಿ ಸುದ್ದಿ, ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ ಕಪ್ಪತ್ತಗುಡ್ಡ ಮಳೆಗಾಲದ ಹಸಿರು ಹೊದಿಕೆ ಹೊದ್ದು ಪ್ರಕೃತಿ ಪ್ರೇಮಿಗಳು, ಚಾರಣಿಗರು ಹಾಗೂ ಯಾತ್ರಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಹದವಾದ ಮಳೆಯ ಸಿಂಚನದಿಂದ ಗುಡ್ಡದ ತುಂಬ ನಾನಾ ಬಗೆಯ ಕಾಡುಹೂಗಳು ಅರಳಿ, ಔಷಧೀಯ ಸಸ್ಯಗಳ ಪರಿಮಳದಿಂದ ಪರಿಸರ ಸುಗಂಧಮಯವಾಗಿದೆ.
“ಎಪ್ಪತ್ತುಗಿರಿ ನೋಡುವುದಕ್ಕಿಂತ ಕಪ್ಪತ್ತಗಿರಿ ನೋಡುವುದೇ ಮೇಲು” ಎಂಬ ಜನಪದ ನುಡಿ ಕಪ್ಪತ್ತಗುಡ್ಡದ ವೈಭವವನ್ನು ಸಾರುತ್ತದೆ. ಔಷಧೀಯ ಸಸ್ಯಗಳ ಆಗರ, ಜೀವವೈವಿಧ್ಯದ ನೆಲೆ, ಪರಿಸರ ಅಧ್ಯಯನದ ಪ್ರಯೋಗಾಲಯ, ಜನಪದ ಕಥೆಗಳ ತೊಟ್ಟಿಲು ಹಾಗೂ ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಪ್ಪತ್ತಗುಡ್ಡ ಇಂದು ಉತ್ತರ ಕರ್ನಾಟಕದ ಪ್ರಮುಖ ಪರಿಸರ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ.
ಸುಮಾರು 33 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಶಿರಹಟ್ಟಿ, ಮುಂಡರಗಿ ಹಾಗೂ ಗದಗ ತಾಲೂಕುಗಳಲ್ಲಿ ಹರಡಿರುವ ಈ ಗಿರಿಶ್ರೇಣಿ ಬಿಂಕದಕಟ್ಟಿಯಿಂದ ಸಿಂಗಟಾಲೂರಿನವರೆಗೆ ಸುಮಾರು 64 ಕಿಲೋಮೀಟರ್ ವಿಸ್ತಾರ ಹೊಂದಿದೆ. ಬೇಸಿಗೆಯಲ್ಲಿ ಬೋಳುಗುಡ್ಡದಂತೆ ಕಾಣುವ ಈ ಪ್ರದೇಶ ಮಳೆಗಾಲದಲ್ಲಿ ಹಸಿರು ಉಡುಗೆಯುಟ್ಟು ಪ್ರಕೃತಿಯ ಮನಮೋಹಕ ಸೌಂದರ್ಯವನ್ನು ಅನಾವರಣಗೊಳಿಸುತ್ತದೆ.

ಅರಣ್ಯ ಇಲಾಖೆಯ ಪರಿಸರ ಕಾಳಜಿ
ಕಪ್ಪತ್ತಗುಡ್ಡಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಮಳೆಗಾಲದಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ 10 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಬೀಜದುಂಡೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಗಿಡ ನೆಡುವ ಅಭಿಯಾನಕ್ಕೆ ಉತ್ತೇಜನ ನೀಡಲಾಗುತ್ತಿದೆ.
ಇದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ಕಪ್ಪತ್ತಗುಡ್ಡ ನಿರ್ಮಾಣದ ಉದ್ದೇಶದಿಂದ ಪ್ರವಾಸಿಗರು ತರುವ ಪ್ಲಾಸ್ಟಿಕ್ ಬಾಟಲಿಗಳಿಗೆ ಸ್ಟಿಕ್ಕರ್ ಅಳವಡಿಸಿ, ಹಿಂದಿರುಗುವಾಗ ಅವುಗಳನ್ನು ಮರಳಿ ತರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯಿಂದ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣದಲ್ಲಿ ಗಮನಾರ್ಹ ಯಶಸ್ಸು ದೊರೆತಿದೆ.
ಕಪ್ಪತ್ತಗುಡ್ಡವನ್ನು ಇನ್ನಷ್ಟು ಹಸಿರುಗೊಳಿಸುವ ಹಾಗೂ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಪ್ಪತ್ತಗುಡ್ಡ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ತಿಳಿಸಿದ್ದಾರೆ.

ಗಾಳಿಗುಂಡಿ ಬಸವಣ್ಣ, ಪವನಚಕ್ರಗಳ ಆಕರ್ಷಣೆ
ಕಪ್ಪತಮಲ್ಲೇಶ್ವರ ದೇವಸ್ಥಾನದಿಂದ ಮುಂದೆ ಚಾರಣ ಮಾಡಿದರೆ ಸಿಗುವ ಗಾಳಿಗುಂಡಿ ಬಸವಣ್ಣ ದೇವಾಲಯ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಗುಡ್ಡದ ತುದಿಯಲ್ಲಿ ಅಳವಡಿಸಿರುವ ಬೃಹತ್ ಪವನಚಕ್ರಗಳು, ನಿರಂತರ ಬೀಸುವ ತಂಗಾಳಿ ಹಾಗೂ ಅಲ್ಲಿಂದ ಕಾಣುವ ವಿಹಂಗಮ ದೃಶ್ಯಗಳು ಪ್ರವಾಸಿಗರನ್ನು ಮನಸೂರೆಗೊಳಿಸುತ್ತವೆ.
ಜೀವವೈವಿಧ್ಯದ ಅಪರೂಪದ ತಾಣ
ಕಪ್ಪತ್ತಗುಡ್ಡ ಔಷಧೀಯ ಸಸ್ಯಗಳ ಆಗರವಾಗಿದ್ದು, ಆಯುರ್ವೇದ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಅಧ್ಯಯನ ಕೇಂದ್ರವಾಗಿದೆ. ಚಿರತೆ, ಕರಡಿ, ತೋಳ, ನರಿ, ಪುನುಗು ಬೆಕ್ಕು, ಚುಕ್ಕೆ ಜಿಂಕೆ, ಸಾರಂಗ, ಮುಳ್ಳುಹಂದಿ ಸೇರಿದಂತೆ ಹಲವು ವನ್ಯಜೀವಿಗಳು ಇಲ್ಲಿ ಆಶ್ರಯ ಪಡೆದಿವೆ. ನವಿಲು, ಬುಲ್‌ಬುಲ್, ಸನ್‌ಬರ್ಡ್, ಮಿಂಚುಳ್ಳಿ, ಬ್ಲ್ಯಾಕ್ ಡ್ರಾಂಗೋ ಸೇರಿದಂತೆ ವೈವಿಧ್ಯಮಯ ಪಕ್ಷಿಗಳು ಪಕ್ಷಿ ವೀಕ್ಷಕರು ಹಾಗೂ ಛಾಯಾಗ್ರಾಹಕರನ್ನು ಸೆಳೆಯುತ್ತಿವೆ.
ಬೆಟ್ಟದ ತಪ್ಪಲಿನಲ್ಲಿರುವ ಅರಣ್ಯ ಇಲಾಖೆಯ ಶ್ರೀ ಕಪ್ಪತಮಲ್ಲೇಶ್ವರ ದೈವೀವನದಲ್ಲಿ ನೂರಾರು ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದ್ದು, ಪ್ರತಿಯೊಂದು ಸಸ್ಯಕ್ಕೂ ಮಾಹಿತಿ ಫಲಕ ಅಳವಡಿಸಲಾಗಿದೆ. ಪ್ರವಾಸಿಗರಿಗೆ ಉಚಿತ ಪ್ರವೇಶವಿದ್ದು, ಪರಿಸರ ಶಿಕ್ಷಣದ ಕೇಂದ್ರವಾಗಿ ಇದು ರೂಪುಗೊಂಡಿದೆ.

ಹೋರಾಟದಿಂದ ಉಳಿದ ಹಸಿರು ಸಂಪತ್ತು
ಹೆಮಟೈಟ್, ಲಿಮೋನೈಟ್, ತಾಮ್ರ, ಮ್ಯಾಂಗನೀಸ್ ಹಾಗೂ ಚಿನ್ನ ಸೇರಿದಂತೆ ಹಲವು ಖನಿಜ ಸಂಪತ್ತು ಹೊಂದಿರುವ ಕಪ್ಪತ್ತಗುಡ್ಡದಲ್ಲಿ ಹಿಂದೆ ಗಣಿಗಾರಿಕೆ ನಡೆಸಲು ಯತ್ನಿಸಲಾಗಿತ್ತು. ಆದರೆ ವಿವಿಧ ಮಠಾಧೀಶರು, ಪರಿಸರ ಹೋರಾಟಗಾರರು, ಚಿಂತಕರು ಹಾಗೂ ನಾಗರಿಕರ ಹೋರಾಟದಿಂದ ಈ ಹಸಿರು ಪ್ರದೇಶ ಉಳಿದುಕೊಂಡಿದೆ.
ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಸೇರಿದಂತೆ ಅನೇಕ ಪರಿಸರ ಪ್ರೇಮಿಗಳು ಕಪ್ಪತ್ತಗುಡ್ಡದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ, ಇಂದು ಇದು ಉತ್ತರ ಕರ್ನಾಟಕದ ಪರಿಸರ ಸಮತೋಲನ ಕಾಪಾಡುವ ಪ್ರಮುಖ ಹಸಿರು ಸಂಪತ್ತಾಗಿ ಉಳಿದಿದೆ.
ಮಳೆಗಾಲದಲ್ಲಿ ಕಪ್ಪತ್ತಗುಡ್ಡದ ಸೌಂದರ್ಯ ಮತ್ತಷ್ಟು ಹೆಚ್ಚಾಗಿದ್ದು, ಶುದ್ಧ ಗಾಳಿ, ಹಸಿರು ಪರಿಸರ, ಔಷಧೀಯ ಸಸ್ಯ ಸಂಪತ್ತು ಹಾಗೂ ಚಾರಣದ ಅನುಭವ ಬಯಸುವವರಿಗೆ ಇದು ಅತ್ಯುತ್ತಮ ಪ್ರವಾಸಿ ತಾಣವಾಗಿದೆ.
“ಮಳೆಗಾಲದ ಹಸಿರು ಹೊದಿಕೆಯಲ್ಲಿ ಕಂಗೊಳಿಸುತ್ತಿರುವ ಕಪ್ಪತ್ತಗುಡ್ಡ ಕೇವಲ ಪ್ರವಾಸಿ ತಾಣವಲ್ಲ, ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಜೀವಂತ ಪಾಠಶಾಲೆಯಾಗಿದೆ. ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯ ಎಸೆಯದೆ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು.”
– ಮಂಜುನಾಥ ಮೇಗಲಮನಿ, ವಲಯ ಅರಣ್ಯಾಧಿಕಾರಿ, ಕಪ್ಪತ್ತಗುಡ್ಡ



