ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಹೊಳೆಮಣ್ಣೂರ, ಅಸೂಟಿ, ಕರಮುಡಿ ಹಾಗೂ ಅಬ್ಬಿಗೇರಿ ಸೇರಿದಂತೆ ಹಲವು ಕಡೆ ನರೇಗಾ ಯೋಜನೆಯಡಿ ನಡೆಯುತ್ತಿರುವ ಸಾಮೂಹಿಕ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಜೊತಗೂಡಿ ಕೇಕ್ ಕತ್ತರಿಸಿ ಕಾರ್ಮಿಕರಿಗೆ ತಿನ್ನಿಸುವ ಮೂಲಕ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
ಅಬ್ಬಿಗೇರಿ ಗ್ರಾಮದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಉದ್ದೇಶಿಸಿ ಮಾತಾನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ, ನರೇಗಾ ಯೋಜನೆಯು ದೇಶದಲ್ಲಿ ಅತಿ ಹೆಚ್ಚು ಕೂಲಿ ಕಾರ್ಮಿಕರಿಗೆ ಕೆಲಸವನ್ನು ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಆಶಾಕಿರಣವಾಗಿದ್ದು, ಬೇಸಿಗೆಯಲ್ಲಿ, ಬರಗಾಲದ ಸಮಯದಲ್ಲಿ ದುಡಿಯಲು ಕೆಲಸ ಇಲ್ಲದ ವೇಳೆ ನರೇಗಾ ಯೋಜನೆಯಡಿ ಸಾಮೂಹಿಕ ಕಾಮಗಾರಿಯ ಕೆಲಸ ನೀಡುವ ಮೂಲಕ ಕೂಲಿಕಾರರಿಗೆ ಇದ್ದೂರಲ್ಲೇ ಕೆಲಸಗಳು ಸಿಗುತ್ತಿವೆ. ಇದು ವಲಸೆ ಹೋಗುವದನ್ನು ತಪ್ಪಿಸುತ್ತದೆ. ಬಡ ಜನರು, ದೀನ ದಲಿತರನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡಲು 2005ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು ಎಂದರು.
ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ದಣಿವಾರಿಸಿಕೊಳ್ಳಲು ನೆರಳಿನ ವ್ಯವಸ್ಥೆ ಮಾಡುವುದನ್ನು ನರೇಗಾ ಯೋಜನೆ ಒಳಗೊಂಡಿದೆ. ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸುವ ದಿನ ಇದಾಗಿದ್ದು, ಸಾಕಷ್ಟು ಕಾರ್ಮಿಕರ, ಹೋರಾಟಗಾರರ ಶ್ರಮದ ಫಲದಿಂದ ಇಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ಕಾರ್ಮಿಕರಿಗೆ ಅಧಿಕ ಸೌಲಭ್ಯಗಳು ಸಿಗುವಂತಾಗಿವೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಕೂಲಿಕಾರರು ಸಂಭ್ರಮಿಸಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ಅಕುಶಲ ಕೂಲಿಕಾರರು ಹಾಜರಿದ್ದು, ಎಲ್ಲರಿಗೂ ಸಿಹಿ ಹಂಚಿ ಹಬ್ಬದಂತೆ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಒ, ಸಮುದಾಯ ತಾಂತ್ರಿಕ ಸಹಾಯಕರು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು, ಗಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಅಕುಶಲ ಕೂಲಿಕಾರರು ಹಾಜರಿದ್ದರು.
ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಮೇ 1ರಿಂದ `ದುಡಿಯೋಣ ಬಾ’ ಅಭಿಯಾನ ಪ್ರಾರಂಭಿಸಲಾಗುತ್ತಿದೆ. ಅಂತೆಯೇ ಮಹಿಳೆಯರ ಅಭ್ಯುದ್ಯಯಕ್ಕಾಗಿ `ಸ್ತ್ರೀ ಚೇತನ’ ಅಭಿಯಾನ ಕೈಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಕುಶಲ ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ ಸಲಹೆ ನೀಡಿದರು.



