IPL 2025: ಒಂದು ವಾರ IPL ಸ್ಥಗಿತ: ಫ್ರಾಂಚೈಸಿಗಳ ಮನವಿ ಮೇರೆಗೆ ಮಹತ್ವದ ನಿರ್ಧಾರ ಕೈಗೊಂಡ BCCI!

0
Spread the love

ಪಹಲ್ಗಾಮ್​ ಉಗ್ರ ದಾಳಿ ಬೆನ್ನಲ್ಲೇ ಪ್ರತೀಕಾರಕ್ಕೆ ಮುಂದಾಗಿದ್ದ ಭಾರತ ಪಾಕಿಸ್ತಾನದ 9 ಸ್ಥಳಗಳಲ್ಲಿ ಕ್ಷಿಪಣಿ ದಾಳಿ ನಡೆಸಿ ಉಗ್ರರ ಅಡುಗುತಾಣಗಳನ್ನು ಧೂಳೀಪಟ ಮಾಡಿತ್ತು. ಇದಕ್ಕೆ ಪ್ರತಿಯಾಗಿ ನಿನ್ನೆ ದಿನ ಪಾಕಿಸ್ತಾನ ಸೇನೆ ಭಾರತದ ಗಡಿ ಪ್ರದೇಶಗಳಲ್ಲಿ ಡ್ರೋನ್​ ದಾಳಿ ನಡೆಸಿದೆ. ಇದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ನಡುವಿನ ಪಂದ್ಯವನ್ನೂ ಅರ್ಧಕ್ಕೆ ನಿಲ್ಲಿಸಲಾಯಿತು. ಇದರ ಬೆನ್ನಲ್ಲೇ ಇಂದು ಬಿಸಿಸಿಐ ಮಹತ್ವದ ಸಭೆ ನಡೆಸಿದ್ದು,

Advertisement

ಇಂದಿನಿಂದ ನಡೆಯಬೇಕಿದ್ದ ಎಲ್ಲ ಐಪಿಎಲ್ ಪಂದ್ಯಾವಳಿಗಳನ್ನು ಬಿಸಿಸಿಐ ಮುಂದೂಡಿದೆ ಎಂದು ವರದಿಯಾಗಿತ್ತು. ಇದೇ ಮೇ 25ರ ತನಕ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆಯಬೇಕಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವುದರಿಂದ ಎಲ್ಲ ಪಂದ್ಯಗಳನ್ನು ಅನಿರ್ದಿಷ್ಟಾವಧಿಯಾಗಿ ಮುಂದೂಡಲಾಗಿದೆ ಎಂದು ವರದಿಯಾಗಿತ್ತು.

ಆದರೆ ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025 ರ ಉಳಿದ ಪಂದ್ಯಗಳು ಯಾವಾಗ ಆರಂಭವಾಗುತ್ತೆ ಅನ್ನೋದನ್ನು ಹೇಳಿದೆ. ಮುಂದಿನ ವಾರ ಐಪಿಎಲ್‌ನ ಹೊಸ ವೇಳಾಪಟ್ಟಿ ಬಿಡುಗಡೆಯಾಗಬಹುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಐಪಿಎಲ್ ಅನ್ನು ಇನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿಲ್ಲ. ಇದನ್ನು ಕೇವಲ ಒಂದು ವಾರದ ಕಾಲ ಮುಂದೂಡಲಾಗಿದೆ. ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಹೊಸ ವೇಳಾಪಟ್ಟಿಯನ್ನು ಮತ್ತೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಐಪಿಎಲ್ ಅನ್ನು ಒಂದು ವಾರ ಸ್ಥಗಿತಗೊಳಿಸಿರುವ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ‘ಐಪಿಎಲ್ ಆಡಳಿತ ಮಂಡಳಿಯು ಎಲ್ಲಾ ತಂಡಗಳೊಂದಿಗೆ ಸೂಕ್ತ ಸಮಾಲೋಚನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಫ್ರಾಂಚೈಸಿಗಳು ತಮ್ಮ ಆಟಗಾರರ ಕಾಳಜಿ ಮತ್ತು ಭಾವನೆಗಳನ್ನು ಹಾಗೂ ಪ್ರಸಾರಕರು, ಪ್ರಾಯೋಜಕರು ಮತ್ತು ಅಭಿಮಾನಿಗಳ ಅಭಿಪ್ರಾಯಗಳನ್ನು ಹಂಚಿಕೊಂಡಿವೆ.

ನಮ್ಮ ಸಶಸ್ತ್ರ ಪಡೆಗಳ ಬಲ ಮತ್ತು ಸನ್ನದ್ಧತೆಯ ಬಗ್ಗೆ ಬಿಸಿಸಿಐಗೆ ಸಂಪೂರ್ಣ ನಂಬಿಕೆ ಇದೆ, ಆದರೆ ಎಲ್ಲಾ ಪಾಲುದಾರರ ಸಾಮೂಹಿಕ ಹಿತಾಸಕ್ತಿಯಿಂದ ಈ ನಿರ್ಧಾರ ತೆಗೆದುಕೊಳ್ಳುವುದು ಸರಿ ಎಂದು ಮಂಡಳಿ ಭಾವಿಸಿದೆ ಎಂದು ಐಪಿಎಲ್ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.


Spread the love

LEAVE A REPLY

Please enter your comment!
Please enter your name here