ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ `ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ’ ಕೇಂದ್ರದ ನೂತನ ಕಟ್ಟಡ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ನೂತನ ಕಟ್ಟಡ ಮತ್ತು ಜೈವಿಕ ಗೊಬ್ಬರ ಗುಣ ನಿಯಂತ್ರಣ ಪ್ರಯೋಗಾಲಯ ಕಟ್ಟಡವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ, ಕೃಷಿ ಇಲಾಖೆ ನಿರ್ದೇಶಕ ಡಾ. ಜಿ.ಟಿ. ಪುತ್ರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಕೃಷಿ ಇಲಾಖೆ ಅಧಿಕಾರಿಗಳು, ರೈತ ಪ್ರಮುಖರು ಉಪಸ್ಥಿತರಿದ್ದರು.
ಎಲ್ಲ ಕೆಲಸವನ್ನು ಸುಲಭವಾಗಿ ಹಾಗೂ ನಿಖರವಾಗಿ ಮಾಡಲು ಎಐ ಸಹಾಯಕವಾಗಿದೆ. ಕಾಲಕಾಲಕ್ಕೆ ಬದಲಾಗುತ್ತಿರುವ ಕೃಷಿ ವಲಯದ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೀತಿ ನಿರ್ಧಾರ ರೂಪಿಸುವಲ್ಲಿ ಪ್ರಸ್ತುತ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ.
ಕೃತಕ ಬುದ್ಧಿಮತ್ತೆ ಕೇಂದ್ರ ಕಟ್ಟಡವನ್ನು 3.75 ಕೋಟಿ ಮೊತ್ತದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿದೆ. ಕಟ್ಟಡದಲ್ಲಿ ವರ್ಕ್ ಸ್ಪೇಸ್ ಕ್ಯೂಬಿಕಲ್ಸ್, ಸರ್ವರ್ ಕೊಠಡಿ, ಬ್ಯಾಟರಿ ಕೊಠಡಿ, ಯುಟಿಲಿಟಿ ಮತ್ತು ಟೂಲ್ ರೂಮ್, ಕಾನ್ಫರೆನ್ಸ್ ಹಾಲ್, ಹಾಡ್ ಕ್ಯಾಬಿನ್, ಊಟದ ಕೊಠಡಿ, ಲಿಫ್ಟ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ. ತರಬೇತಿ ಕೇಂದ್ರದ ನೂತನ ಕಟ್ಟಡವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಧಾರವಾಡ ಇವರಿಂದ ನಿರ್ಮಿಸಲಾಗಿದೆ.
ಕೃತಕ ಬುದ್ಧಿಮತ್ತೆಯನ್ನು ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಬಳಸುವುದು ಯೋಜನೆಯ ಉದ್ದೇಶವಾಗಿದೆ. ಇದರಿಂದ ವಿವಿಧ ಕ್ಷೇತ್ರಗಳ ಜ್ಞಾನವನ್ನು ಬಳಸಿಕೊಳ್ಳಬಹುದು. ಇತ್ತೀಚಿನ ದಿನಮಾನಗಳಲ್ಲಿ ಈ ತಂತ್ರಜ್ಞಾನ ಬಳಸಿ ಉತ್ಪಾದನಾ ಪದ್ಧತಿ ಸುಧಾರಿಸಲಾಗಿದೆ, ಇಳುವರಿ ಹೆಚ್ಚಾಗಿದೆ, ಕೃಷಿ ಕ್ಷೇತ್ರವು ವೈವಿಧ್ಯಮಯವಾಗಿದೆ. ಯಥೇಚ್ಚ ಅಂಕಿ ಅಂಶ ಮತ್ತು ದೊಡ್ಡ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸುವುದು, ಬಳಸುವುದು, ಅವಶ್ಯವಾಗಿದೆ.



