HomeGadag Newsರಾಜ್ಯದ ರೈಲ್ವೆ ಯೋಜನೆಗೆ ಶರವೇಗ

ರಾಜ್ಯದ ರೈಲ್ವೆ ಯೋಜನೆಗೆ ಶರವೇಗ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: `ಅಚ್ಛೇ ದಿನ್ ಎಲ್ಲಿದೆ’ ಎಂದು ಪ್ರಶ್ನಿಸುವವರು ತಮ್ಮ ಕನ್ನಡಕ ತೆಗೆದು ನೋಡಬೇಕಿದೆ. ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ 2025-26ರ ಸಾಲಿನಲ್ಲಿ 7600 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಕಳೆದೊಂದು ದಶಕದಲ್ಲಿ ಪ್ರತಿ ವರ್ಷ ಕರ್ನಾಟಕಕ್ಕೆ 7 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಒದಗಿಸಲಾಗಿದೆ. ಸದ್ಯ 51 ಸಾವಿರ ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಗುರುವಾರ ಅಮೃತ ಭಾರತ್ ರೈಲ್ವೆ ಸ್ಟೇಷನ್ ಯೋಜನೆಯಡಿ 23.24 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಹೊಂದಿದ ಗದಗ ರೈಲ್ವೆ ನಿಲ್ದಾಣ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

2014ರಲ್ಲಿ ದೇಶದಲ್ಲಿ 21-22 ಸಾವಿರ ಕಿ.ಮೀ. ರೈಲ್ವೆ ಮಾರ್ಗ ವಿದ್ಯುದೀಕರಣವಾಗಿತ್ತು. ಸದ್ಯ 69 ಸಾವಿರ ಕಿ.ಮಿ. ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ಕೇವಲ ದಶಕದ ಅವಧಿಯಲ್ಲಿ 40 ಸಾವಿರ ಕಿ.ಮೀ. ವಿದ್ಯುದೀಕರಣ ಮಾಡಿರುವುದು ದಾಖಲೆ ಮಾತ್ರವಲ್ಲದೇ ರೈಲ್ವೆ ಮಾರ್ಗ ವಿದ್ಯುದೀಕರಣದಲ್ಲಿ ಜಗತ್ತಿನಲ್ಲಿಯೇ ಭಾರತ 2ನೇ ಸ್ಥಾನದಲ್ಲಿದೆ ಎಂದರು.

ಯುಪಿಎ ಸರಕಾರದ ಅವಧಿಯಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ 800 ಕೋಟಿ ರೂ. ಬಿಡುಗಡೆಯಾಗಿತ್ತು. ಅಂದಿನ ರೈಲ್ವೆ ಸಚಿವರಾಗಿದ್ದ ಮುನಿಯಪ್ಪ, ಬಜೆಟ್ ಭಾಷಣದ ನಡುವೆಯೇ ಕರ್ನಾಟಕಕ್ಕೆ ಹೆಚ್ಚು ಅನುದಾನ ಕೊಟ್ಡಿರುವುದಾಗಿ ಹೇಳಿದ್ದರು. ಆದರೆ ಮೋದಿ ಸರಕಾರ ಪ್ರತಿ ವರ್ಷ 7 ಸಾವಿರ ಕೋಟಿ ರೂ. ನೀಡುವ ಮೂಲಕ ಅತ್ಯಂತ ಗರಿಷ್ಠ ಅನುದಾನ ಒದಗಿಸಿ ರಾಜ್ಯದ ರೈಲ್ವೆ ಯೋಜನೆಗೆ ಇನ್ನಿಲ್ಲದ ವೇಗ ನೀಡಿದೆ ಎಂದರು.

ಕರ್ನಾಟಕದಲ್ಲಿ 1659 ಕಿ.ಮೀ. ಹೊಸ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಲಾಗುತ್ತಿದ್ದು, ಇದು ಶ್ರೀಲಂಕಾದ ಒಟ್ಟು ರೈಲ್ವೆ ಜಾಲಕ್ಕಿಂತ ಹೆಚ್ಚಾಗಿದೆ. ರೈಲ್ವೆ ಸುರಕ್ಷಾ ಕ್ಷೇತ್ರಕ್ಕೂ ಆದ್ಯತೆ ನೀಡಿದ್ದು, ಒಟ್ಟಾರೆ 1,16,514 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ಗಂಟೆಗೆ 130 ಕಿ.ಮೀ. ವೇಗದಲ್ಲಿ ವಂದೇ ಭಾರತ್ ರೈಲುಗಳು ಓಡಾಡುತ್ತಿರುವುದು ದೇಶ ಪ್ರಗತಿ ಪಥದಲ್ಲಿ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಗದಗ ರೈಲ್ವೆ ನಿಲ್ದಾಣದ ಪುನರ್ ಅಭಿವೃದ್ಧಿ ಈ ಭಾಗದ ಕೈಗಾರಿಕೆ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಬಲ ತುಂಬಿದೆ. 1884ರಲ್ಲಿ ಆರಂಭವಾದ ಗದಗ ರೈಲ್ವೆ ನಿಲ್ದಾಣಕ್ಕೆ ಭವ್ಯ ಇತಿಹಾಸವಿದೆ. ಇಂಥ ನಿಲ್ದಾಣವನ್ನು ಅಭಿವೃದ್ಧಿ ಮಾಡಿರುವುದು ಸಂತಸ ತಂದಿದೆ ಎಂದ ಅವರು, ರೈಲ್ವೆ ನಿಲ್ದಾಣದ ಅಭಿವೃದ್ಧಿ ಜೊತೆಗೆ ಗದಗ-ವಾಡಿ, ಗದಗ-ಯಲವಗಿ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನೈರುತ್ಯ ರೈಲ್ವೆ ವಲಯದ ಪ್ರಧಾನ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸ್ತ್ರೀ, ನೈರುತ್ಯ ರೈಲ್ವೆ ವಲಯದಲ್ಲಿ ಗದಗ ರೈಲ್ವೆ ನಿಲ್ದಾಣ ಅತ್ಯಂತ ಪ್ರಮುಖವಾಗಿದೆ. ಪ್ರತಿನಿತ್ಯ ಸರಾಸರಿ 4 ಸಾವಿರ ಜನ ಸಂಚಾರ ಮಾಡುತ್ತಾರೆ. ಅಂದಾಜು 5 ಲಕ್ಷ ರೂ. ಆದಾಯವಿದೆ. ಒಟ್ಟು 23.24 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಆಗಿದೆ ಎಂದರು.

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಮುಖಂಡರಾದ ಜಿ.ಕೆ. ಆದಾಪ್ಪಗೌಡ, ವಿಎಚ್. ಹಿರೇಗೌಡರ, ತಾತನಗೌಡ ಪಾಟೀಲ, ಎಸ್.ಪಿ. ಸಂಶಿಮಠ, ಸಂಗಮೇಶ ದುಂದೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮುಂತಾದವರು ಉಪಸ್ಥಿತರಿದ್ದರು.

ಅಮೃತ ಭಾರತ್ ರೈಲ್ವೆ ಸ್ಟೇಷನ್ ಹಾಗೂ ಆಪರೇಷನ್ ಸಿಂಧೂರ ವಿಷಯವಾಗಿ ಶಾಲಾ ಮಕ್ಕಳಿಗಾಗಿ ರೈಲ್ವೆ ಇಲಾಖೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ದೇಶದ ಭದ್ರತೆಯ ಹಿತದೃಷ್ಟಿಯಿಂದ ರಕ್ಷಣಾ ಇಲಾಖೆಗೆ ವಾರ್ಷಿಕ 7 ಲಕ್ಷ ಕೋಟಿ ರೂ. ಒದಗಿಸಲಾಗಿದೆ. ಆ ಕಾರಣಕ್ಕಾಗಿಯೇ ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ ಯಶಸ್ವಿಯಾಯಿತು. ಭವಿಷ್ಯದಲ್ಲಿ ಭಯೋತ್ಪಾದನೆ ನಡೆದರೆ, ಅದನ್ನು ಯುದ್ಧವೆಂದು ಪರಿಗಣಿಸಿ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ ಎಂದು ಪ್ರಹ್ಲಾದ ಜೋಶಿ ಇದೇ ಸಂದರ್ಭದಲ್ಲಿ ಹೇಳಿದರು.

“ರೈಲ್ವೆಗಳ ವಿದ್ಯುದೀಕರಣದಿಂದ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಡಿಸೇಲ್ ಮೇಲಿನ ಅವಲಂಬನೆ ಹಾಗೂ ವಾಯುಮಾಲಿನ್ಯ ಕಡಿಮೆಯಾಗಲು ಕಾರಣವಾಗಿದೆ. ಸದ್ಯ ದೇಶದ ಶೇ. 99 ರೈಲುಗಳು ವಿದ್ಯುತ್‌ನಿಂದ ಚಲಿಸುತ್ತಿವೆ. ಈ ಪೈಕಿ ಶೇ. 50ರಷ್ಟು ಕಲ್ಲಿದ್ದಲು ಮೂಲಕ ಉತ್ಪತ್ತಿಯಾಗುವ ವಿದ್ಯುತ್ ಬಳಕೆ ಮಾಡಲಾಗುತ್ತಿದ್ದರೆ, ಇನ್ನುಳಿದ ಶೇ.50ರಷ್ಟು ವಿದ್ಯುತ್‌ನ್ನು ಸೋಲಾರ್, ಪವನ ವಿದ್ಯುತ್‌ನಿಂದ ಪಡೆದು 640 ಕೋಟಿ ಲೀಟರ್ ಡೀಸೆಲ್ ಉಳಿತಾಯ ಮಾಡಿದ್ದೇವೆ

– ಪ್ರಹ್ಲಾದ ಜೋಶಿ.

ಕೇಂದ್ರ ಸಚಿವರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!