ತಮಿಳು ಚಿತ್ರರಂಗದ ಹಿರಿಯ ನಟ, ಸೂಪರ್ ಸ್ಟಾರ್ ರಜನಿಕಾಂತ್ ಆಪ್ತ ಸ್ನೇಹಿತ ರಾಜೇಶ್ ಕೊನೆಯುಸಿರೆಳೆದಿದ್ದಾರೆ. ರಾಜೇಶ್ ಅವರಿಗೆ 73 ವರ್ಷ ವಯಸ್ಸಾಗಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶಿವಾಜಿ ಗಣೇಶನ್-ಎಂಜಿಆರ್ ಕಾಲಘಟ್ಟದಲ್ಲಿ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಾಜೇಶ್ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ವರ್ಗ ಹೊಂದಿದ್ದ ರಾಜೇಶ್ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.
ತಮಿಳಿನ ಜೊತೆಗೆ ಮಲಯಾಳಂ ಸಿನಿಮಾದಲ್ಲೂ ನಟಿಸಿ ಅಲ್ಲೂ ಸಾಕಷ್ಟು ಖ್ಯಾತಿ ಘಳಿಸಿದ್ದರು. ರಾಜೇಶ್ ಅವರು ನಟನಾಗಿ ಮಾತ್ರವೇ ಅಲ್ಲದೆ ಲೇಖಕನಾಗಿ, ಯೂಟ್ಯೂಬರ್ ಹಾಗೂ ಯಶಸ್ವಿ ಉದ್ಯಮಿ ಜೊತೆಗೆ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು.
ಸ್ನೇಹಿತನ ನಿಧನಕ್ಕೆ ಕಂಬನಿ ಮಿಡಿದಿರುವ ನಟ ರಜನೀಕಾಂತ್, ‘ರಾಜೇಶ್ ನನ್ನ ಅತ್ಯಂತ ಆಪ್ತ ನಟ, ಅವರು ಹೃದಯವಂತ ವ್ಯಕ್ತಿಯಾಗಿದ್ದರು. ಅವರ ಸಾವು ನನಗೆ ಆಘಾತ ತಂದಿದೆ’ ಎಂದು ಟ್ವೀಟ್ ಮಾಡಿದ್ದಾರೆ. ನಟ ಕಮಲ್ ಹಾಸನ್ ಟ್ವೀಟ್ ಮಾಡಿ, ‘ರಾಜೇಶ್ ಅವರು ಪರಿಪೂರ್ಣ ನಟ, ಅವರು ಜ್ಞಾನಕ್ಕಾಗಿ ಹಾತೊರೆಯುತ್ತಿದ್ದರು. ಓದುವುದು ಅವರ ಬಹು ಮುಖ್ಯ ಹವ್ಯಾಸವಾಗಿತ್ತು. ಅಂತಿಮ ದಿನಗಳ ವರೆಗೂ ಅವರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು’ ಎಂದಿದ್ದಾರೆ.