HomeGadag Newsಮೃಗಶಿರೆ ಅಬ್ಬರಕ್ಕೆ ನಲುಗಿದ ಜನತೆ

ಮೃಗಶಿರೆ ಅಬ್ಬರಕ್ಕೆ ನಲುಗಿದ ಜನತೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೃಗಶಿರಾ ಮಳೆಯ ಅಬ್ಬರಕ್ಕೆ ಜನತೆ ನಲುಗಿಹೋಗಿದ್ದು, ಕುಂದ್ರಳ್ಳಿ ಗ್ರಾಮವಂತೂ ಅಕ್ಷರಶಃ ನೀರಿನಲ್ಲಿ ನಿಂತಂತಾಗಿದೆ. ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಸುಮಾರು 30 ಎಕರೆಯಲ್ಲಿ ಮಳೆಯ ನೀರು ನಿಂತುಕೊಂಡು ಬೆಳೆಯುತ್ತಿರುವ ಮೆಕ್ಕೆಜೋಳ ಬೆಳೆ ಕೊಳೆಯುವ ಭೀತಿ ರೈತರನ್ನು ಕಾಡುತ್ತಿದೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಭಾಗದಿಂದ ಅಪಾರ ಪ್ರಮಾಣದ ಮಳೆ ನೀರು ತಗ್ಗು ಪ್ರದೇಶಗಳಲ್ಲಿನ 24 ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿತು. ಇಕ್ಕಟ್ಟಾದ ರಸ್ತೆಗಳೆಲ್ಲವೂ ನೀರಿನಿಂದ ಆವೃತ್ತವಾಗಿದ್ದವು. ಚರಂಡಿಗಳು ಮುಚ್ಚಿಕೊಂಡಿದ್ದರಿಂದ ನೀರು ನೇರವಾಗಿ ರಸ್ತೆಯಿಂದ ತಗ್ಗು ಪ್ರದೇಶಗಳಿಗೆ ನುಗ್ಗಿ ಅನೇಕ ಮನೆಗಳು ನೀರಿನಲ್ಲಿ ನಿಲ್ಲುವಂತಾಗಿದೆ. ರಾತ್ರಿಯ ವೇಳೆಗೆ ಈ ವಿಷಯ ತಿಳಿದ ತಾಲೂಕಿನ ತಹಸೀಲ್ದಾರ ವಾಸುದೇವ ಸ್ವಾಮಿ ಅವರು ರಾತ್ರಿ 11 ಗಂಟೆಯಾಗಿದ್ದರೂ ಸ್ಥಳಕ್ಕೆ ತೆರಳಿ ನೀರು ನುಗ್ಗಿದ ಮನೆಗಳ ಪರಿಶೀಲನೆ ನಡೆಸಿದರು.

ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ನೀರು ಹೊರಹಾಕಲು ಕುಟುಂಬಸ್ಥರು ಪರದಾಡಿದರು. ನಂತರ ತಹಸೀಲ್ದಾರರು ಸರಕಾರಿ ಶಾಲೆಯಲ್ಲಿ ಆಯಾ ಕುಟುಂಬಗಳಿಗೆ ತಂಗಲು ಸ್ಥಳಾವಕಾಶ ಕಲ್ಪಿಸಿಕೊಟ್ಟರು. ಈ ಸಂದರ್ಭದಲ್ಲಿ ಪಿಡಿಒ ಎಂ.ಎನ್. ಮಾದರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಮಸ್ಯೆ ಪರಿಹಾರದ ಕುರಿತು ಚರ್ಚಿಸಿದರು. ಗ್ರಾಮದ ಚೆನ್ನವೀರಪ್ಪ ಪಲ್ಲೇದ, ಚನ್ನಬಸವ್ವ ಹಾಲಪ್ಪ ಹೂಗಾರ, ನೀಲವ್ವ ಫಕ್ಕೀರೇಶ ಹೂಗಾರ, ನಿಂಗವ್ವ ಯಲ್ಲಪ್ಪ ಗೌರಿ, ಬಸನಗೌಡ ಪಾಟೀಲ, ಗೋಣೆಪ್ಪಗೌಡ ಪಾಟೀಲ, ಚಿಕ್ಕುಸಾಬ್ ನದಾಫ್, ದುದ್ದುಸಾಬ್ ನದಾಫ್ ಸೇರಿದಂತೆ 24 ಮನೆಗಳಿಗೆ ನೀರು ನುಗ್ಗಿತ್ತು. ನಿಂಗವ್ವ ಫಕ್ಕೀರೇಶ ಗೌರಿ ಅವರು ಮನೆಯೊಳಗೆ ನೀರು ಬರದಂತೆ ಉಸುಕು ತುಂಬಿದ ಚೀಲಗಳನ್ನು ಬಾಗಿಲಿಗೆ ಅಡ್ಡ ಇಟ್ಟಿದ್ದರೂ ನೀರು ಚೀಲಗಳ ಮೇಲಿಂದ ಮನೆಗೆ ನುಗ್ಗಿದೆ. ಏಕಾಏಕಿ ಮಳೆ ನೀರು ಮನೆಗೆ ನುಗ್ಗಿದ್ದರಿಂದ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ. ಮನೆಯಲ್ಲಿ ಇದ್ದವರೆಲ್ಲ ಹೆದರಿದ್ದೆವು ಎಂದು ನೀಲವ್ವ ಹೂಗಾರ ಪರಿಸ್ಥಿತಿಯನ್ನು ವಿವರಿಸಿದರು.

ನೋಡಲ್ ಅಧಿಕಾರಿ ಅಮಿತ್ ಬಿದರಿ, ತಹಸೀಲ್ದಾರ ವಾಸುದೇವ ಸ್ವಾಮಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಪಿಡಿಒ ಎಂ.ಎನ್. ಮಾದರ, ಕಂದಾಯ ನಿರೀಕ್ಷಕ ನದಾಫ್, ಗ್ರಾಮ ಆಡಳಿತಾಧಿಕಾರಿ ಮಲ್ಲಿಗವಾಡ ಮತ್ತಿತರ ಅಧಿಕಾರಿಗಳ ತಂಡ ಗುರುವಾರ ಕುಂದ್ರಳ್ಳಿ ಗ್ರಾಮಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ ಮಾಹಿತಿ ನೀಡಿ, ಮಳೆ ಬಂದು ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಸಂತ್ರಸ್ತ ನಿವಾಸಿಗಳಿಗಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸೂಚನೆ ನೀಡಲಾಗಿದೆ. ಅದರೊಂದಿಗೆ ಮನೆಗಳಿಗೆ ನೀರು ನುಗ್ಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!