ವಿಶಾಖಪಟ್ಟಣಂ:- ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. yoga for one health one earth ಎಂಬ ಥೀಮ್‌ನೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವನ್ನು ಆಂಧ್ರಪ್ರದೇಶ ಸರ್ಕಾರದ ಆಶ್ರಯದಲ್ಲಿ ಯೋಗ ಆಂಧ್ರ 2025 ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಸಚಿವ ನಾರಾ ಲೋಕೇಶ್, ಇತರ ಸಾರ್ವಜನಿಕ ಪ್ರತಿನಿಧಿಗಳು, ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸರ್ಕಾರಿ ನೌಕರರು, ಶಾಲಾ ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರು, ಯೋಗ ಸಂಘಗಳು, ನೌಕಾಪಡೆ, ಕೋಸ್ಟ್ ಗಾರ್ಡ್ ಸದಸ್ಯರು ಮತ್ತು ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆ ಬಳಿಕ ಪವನ್ ಕಲ್ಯಾಣ್ ಅವರು ಯೋಗ ದಿನಾಚರಣೆ ಬಗ್ಗೆ ಮಾತನಾಡಿದರು. ಮತ್ತು ಯೋಗ ದಿನಾಚರಣೆಗೆ ಕಾರಣವಾದ ಮೋದಿಯನ್ನು ಶ್ಲಾಘಿಸಿದರು. ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ. ವಿಶ್ವಸಂಸ್ಥೆಯಲ್ಲಿ ಯೋಗದ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಇದರಿಂದಾಗಿ ಈ ದಿನವನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲು ಸಾಧ್ಯವಾಗಿದೆ’ ಎಂದು ಪವನ್ ಕಲ್ಯಾಣ್ ಅವರು ಹೇಳಿದರು.