ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದು, ರಾಜ್ಯ ರಾಜಕೀಯದಲ್ಲಿ ನಡೆದಿದ್ದ ಹಲವು ದಿನಗಳ ಹೈಡ್ರಾಮಾಗಳಿಗೆ ತೆರೆ ಬಿದ್ದಿದೆ.
ಈ ಮೊದಲು ಮುಂಗಾರು ಅಧಿವೇಶನ ಆರಂಭವಾದ ಬಳಿಕ, ಅಂದರೆ ಆಗಸ್ಟ್ 14ರಂದು ಸಭಾಪತಿ ಸ್ಥಾನ ತೊರೆಯುವುದಾಗಿ ಹೊರಟ್ಟಿ ಘೋಷಿಸಿದ್ದರು. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನಡೆಸಿದ ಸುದೀರ್ಘ ಮಾತುಕತೆ ಮತ್ತು ಮನವೊಲಿಕೆ ಬಳಿಕ ಅವರು ನಿರ್ಧಾರ ಬದಲಿಸಿ ತಕ್ಷಣವೇ ರಾಜೀನಾಮೆ ಸಲ್ಲಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಯಾವುದೇ ಒತ್ತಡ ಅಥವಾ ಬಲವಂತವಿಲ್ಲದೆ, ಸಂಪೂರ್ಣ ಸ್ವಇಚ್ಛೆಯಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ. ನೂತನ ಸಭಾಪತಿ ಆಯ್ಕೆಯಾಗುವವರೆಗೆ ಹಂಗಾಮಿ ಸಭಾಪತಿಯಾಗಿ ಮುಂದುವರಿಯಲಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಸಂಖ್ಯಾಬಲ ಹೆಚ್ಚಿರುವ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಹಾಗೂ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರನ್ನು ಕಾಂಗ್ರೆಸ್ ವರಿಷ್ಠರು ಅಂತಿಮಗೊಳಿಸಿರುವ ಮಾಹಿತಿ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ರೂಪ ಸಿಗುವ ಸಾಧ್ಯತೆ ಇದೆ.



