HomeKarnataka Newsಕಾವೇರಿ ವಿವಾದದ ಬಗ್ಗೆ ಮೌನ ಮುರಿದ ತಮಿಳುನಾಡು ಸಿಎಂ ವಿಜಯ್; ಡಿಕೆಶಿ ಭೇಟಿ ವಿಚಾರಕ್ಕೆ ಸ್ಪಷ್ಟನೆ

ಕಾವೇರಿ ವಿವಾದದ ಬಗ್ಗೆ ಮೌನ ಮುರಿದ ತಮಿಳುನಾಡು ಸಿಎಂ ವಿಜಯ್; ಡಿಕೆಶಿ ಭೇಟಿ ವಿಚಾರಕ್ಕೆ ಸ್ಪಷ್ಟನೆ

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸುವ ವಿಚಾರದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಸ್ಪಷ್ಟನೆ ನೀಡಿದ್ದಾರೆ.

ಆಗಸ್ಟ್‌ 3ರಂದು ನಡೆಯಬೇಕಿದ್ದ ಮಾತುಕತೆ ನಡೆದಿಲ್ಲ ಎಂಬ ವರದಿಗಳ ಬೆನ್ನಲ್ಲೇ, ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ವಿಜಯ್, ಕಾವೇರಿ ವಿಚಾರದಲ್ಲಿ ತಮ್ಮ ಸರ್ಕಾರದ ಕಾನೂನು ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆದರೆ, ಸಮಸ್ಯೆಗೆ ಸಕಾರಾತ್ಮಕ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರಿಗೆ ತೆರಳಿ ಕರ್ನಾಟಕದ ನಾಯಕರೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ಮಾಡಬೇಕು ಎಂಬ ಆಲೋಚನೆ ತಮ್ಮಲ್ಲಿತ್ತು ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲು ತಾವು ಬಯಸುವುದಿಲ್ಲ ಎಂದು ತಿಳಿಸಿದ ವಿಜಯ್, ರಾಜ್ಯದ ಹಕ್ಕುಗಳ ರಕ್ಷಣೆಯ ಜೊತೆಗೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದು ಅಗತ್ಯವಾಗಿದೆ ಎಂದರು.

ವಿಧಾನಸಭೆಯಲ್ಲಿ ಕಾವೇರಿ ವಿಚಾರ ಪ್ರಸ್ತಾಪಿಸಿದ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರಿಗೆ ಉತ್ತರಿಸಿದ ಅವರು, 1969ರಿಂದ ತಮಿಳುನಾಡು ಕಾವೇರಿ ವಿವಾದವನ್ನು ಹೇಗೆ ಎದುರಿಸುತ್ತಿದೆ ಎಂಬುದನ್ನು ವಿವರಿಸಿದರು. ಆರಂಭದಲ್ಲಿ ಮಾತುಕತೆಗೆ ಆದ್ಯತೆ ನೀಡಲಾಗಿತ್ತು. ನಂತರ ಕಾನೂನು ಹೋರಾಟದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ನಿಲುವು ಮುಂದುವರಿದಿದೆ ಎಂದು ಹೇಳಿದರು.

ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದ ಮತ್ತೆ ತೀವ್ರಗೊಂಡಿದೆ. ಕರ್ನಾಟಕ ಸರ್ಕಾರ ಯೋಜನೆ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಚರ್ಚೆಗಳು ಜೋರಾಗಿವೆ.

ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡಿನ ಎಲ್ಲ ಪಕ್ಷಗಳು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಕಾವೇರಿ ಜಲ ವಿವಾದದ ಕುರಿತು ಸರ್ವಪಕ್ಷ ಸಭೆ ಕರೆದು ರಾಜ್ಯದ ಕೃಷಿ ಹಾಗೂ ನೀರಾವರಿ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಕರ್ನಾಟಕ ಪ್ರವಾಸ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ವಿಜಯ್ ಸ್ಪಷ್ಟನೆ ನೀಡಬೇಕು ಎಂದು ಉದಯನಿಧಿ ಸ್ಟಾಲಿನ್ ಒತ್ತಾಯಿಸಿದ್ದಾರೆ.

ಮೇಕೆದಾಟು ವಿಚಾರದಲ್ಲಿ ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ತಮಿಳುನಾಡು ಸಚಿವ ಆದವ್ ಅರ್ಜುನ್ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಆಡಳಿತದ ಅವಧಿಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೇಕೆದಾಟು ಸಂಬಂಧಿತ ಅರ್ಜಿಗಳು ಹಲವು ಬಾರಿ ಹಿನ್ನಡೆ ಅನುಭವಿಸಿವೆ ಎಂದು ಆರೋಪಿಸಿದ ಅವರು, ಸ್ಟಾಲಿನ್ ಸರ್ಕಾರದ ಅವಧಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿತ್ತು. ಬಳಿಕ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಹಾಗೂ ಕ್ಯೂರೇಟಿವ್ ಅರ್ಜಿಯೂ ತಿರಸ್ಕೃತವಾಗಿವೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವನ್ನು ಸಮರ್ಪಕವಾಗಿ ಮಂಡಿಸದಿರುವುದೇ ಈ ಹಿನ್ನಡೆಗೆ ಕಾರಣ ಎಂದು ಆರೋಪಿಸಿದ ಅವರು, ಹೊಸ ಕಾನೂನು ತಂಡದೊಂದಿಗೆ ಟಿವಿಕೆ ಸರ್ಕಾರ ಕಾವೇರಿ ಮತ್ತು ಮೇಕೆದಾಟು ವಿಚಾರದಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img