ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ನಡುವೆಯೇ ಬೆಂಗಳೂರಿನಲ್ಲಿ ಪಟಾಕಿ ಅವಘಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅವಘಡಗಳಿಂದ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಹಲವರು ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ಪಟಾಕಿ ಅವಘಡದಿಂದ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 61ಕ್ಕೆ ಏರಿಕೆಯಾಗಿದ್ದು, ಆತಂಕ ಮೂಡಿಸಿದೆ.

ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಅವಘಡದಿಂದ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ 20 ಪ್ರಕರಣಗಳು ದಾಖಲಾಗಿದ್ದರೆ, ನಾರಾಯಣ ನೇತ್ರಾಲಯದಲ್ಲಿ 41 ಪ್ರಕರಣಗಳು ವರದಿಯಾಗಿವೆ.
ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಐದು ವರ್ಷದ ಇಬ್ಬರು ಮಕ್ಕಳು, 5ರಿಂದ 10 ವರ್ಷದೊಳಗಿನ ಓರ್ವ ಬಾಲಕ ಹಾಗೂ 10ರಿಂದ 20 ವರ್ಷದೊಳಗಿನ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ, 20ರಿಂದ 40 ವರ್ಷದೊಳಗಿನ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 12 ಮಂದಿಗೆ ಕಣ್ಣಿನ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಇನ್ನು ನಗರದ ನಾರಾಯಣ ನೇತ್ರಾಲಯದಲ್ಲಿಯೂ ಪಟಾಕಿ ಅವಘಡಗಳ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಯಲ್ಲಿ ಒಟ್ಟು 41 ಪ್ರಕರಣಗಳು ವರದಿಯಾಗಿವೆ. ಲಭ್ಯವಿರುವ ವಿವರಗಳ ಪ್ರಕಾರ, ಗಾಯಗೊಂಡವರಲ್ಲಿ 18 ವರ್ಷದೊಳಗಿನ 15 ಮಕ್ಕಳು ಸೇರಿದ್ದಾರೆ. ಗಾಯಾಳುಗಳಲ್ಲಿ 19 ಪುರುಷರು ಹಾಗೂ 12 ಮಹಿಳೆಯರು ಇರುವುದಾಗಿ ಮಾಹಿತಿ ನೀಡಲಾಗಿದೆ.
ವಿಶೇಷವೆಂದರೆ, ಪಟಾಕಿ ಸಿಡಿಸುವವರಷ್ಟೇ ಅಲ್ಲದೆ ಅದನ್ನು ನೋಡಲು ನಿಂತಿದ್ದವರಿಗೂ ಗಾಯಗಳಾಗಿವೆ. ನಾರಾಯಣ ನೇತ್ರಾಲಯದ ಮಾಹಿತಿ ಪ್ರಕಾರ, ಸ್ವತಃ ಪಟಾಕಿ ಹಚ್ಚುವಾಗ 23 ಮಂದಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಇನ್ನು ಎಂಟು ಮಂದಿ ಇತರರು ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಒಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಉಳಿದ 30 ಮಂದಿಗೆ ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.










