ಶಿವಮೊಗ್ಗ: ಶಿವಮೊಗ್ಗದ ಬಂಗಾರಪ್ಪ ಬಡಾವಣೆಯಲ್ಲಿ ನಡೆದ ವಿಗ್ರಹ ಅವಮಾನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತೀವ್ರ ಕ್ರಮ ಕೈಗೊಂಡಿದ್ದಾರೆ. ಈ ಘಟನೆಯ ಸಂಬಂಧ ರೆಹಮತ್ವಲ್ಲಾ ಮತ್ತು ಸದ್ದಾಂ ಎಂಬ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಘಟನೆ ಹಿನ್ನೆಲೆ ಶಾಂತಿ ಕಾಪಾಡಲು ಬಡಾವಣೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬಂಗಾರಪ್ಪ ಬಡಾವಣೆಯ ಪಾರ್ಕ್ ನಲ್ಲಿ ಪ್ರತಿಷ್ಠಾಪಿತವಾಗಿದ್ದ ಗಣೇಶನ ಮೂರ್ತಿಗೆ ಕಾಲಿನಿಂದ ಒದ್ದು, ಅಲ್ಲೇ ಇದ್ದ ನಾಗದೇವರ ವಿಗ್ರಹವನ್ನು ಚರಂಡಿಗೆ ಎಸೆದ ಇಬ್ಬರು ಯುವಕರು ಪರಾರಿಯಾಗಿದ್ದರು. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಸೃಷ್ಟಿಸಿತ್ತು.
ಕಿಡಿಗೇಡಿಗಳ ವರ್ತನೆಯಿಂದ ಕೆಲಕಾಲ ಬಡಾವಣೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.