ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಸರಣಿಗಳು ಮುಂದುವರೆದಿದ್ದು, ಇಂದು ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಹಾಸನ ನಗರದ ಅಮೀರ್ ಮೊಹಲ್ಲಾದ ನಿವಾಸಿ ಮುಹೀತ್ (53) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಮನೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡ ಮುಹೀತ್, ತಾನು ಆಸ್ಪತ್ರೆಗೆ ಹೋಗಬೇಕೆಂದು ತಿಳಿಸಿದ್ದಾರೆ.
ಮನೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ, ಮಾರ್ಗಮಧ್ಯೆಯೇ ಎದೆನೋವು ಹೆಚ್ಚಾಗಿ ಅವರು ಸಾವನ್ನಪ್ಪಿದ್ದಾರೆ.ಮುಹೀತ್ ಹಾಸನದಲ್ಲಿ ಮೊಬೈಲ್ ರಿಪೇರಿ ವ್ಯಾಪಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಕಳೆದ 46 ದಿನಗಳಲ್ಲಿ 39 ಮಂದಿ ಹೃದಯಾಘಾತದಿಂದ ಮೃತಪಟ್ಟಿರುವುದು ಚಿಂತೆಗೆ ಕಾರಣವಾಗಿದೆ.



