ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವಿದ್ಯಾವಂತ ಯುವ ಜನರು ಶಾಖಾ ಗ್ರಂಥಾಲಯದ ಉಪಯೋಗವನ್ನು ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಣ್ಣ ದೊಡ್ಡಮನಿ ಸಲಹೆ ನೀಡಿದರು.
ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಸಾಪುರ ಗ್ರಾಮದಲ್ಲಿ ಶಾಖಾ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾವಂತ ಯುವಕರು ಗ್ರಂಥಾಲಯಗಳಲ್ಲಿ ದಿನಪತ್ರಿಕೆ, ಕಾದಂಬರಿ, ಸ್ವರ್ಧಾತ್ಮಕ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಬೆಳಸಿಕೊಳ್ಳುತ್ತಿದ್ದರು. ಈಗ ಕಾಲ ಬದಲಾದಂತೆ ಆನ್ಲೈನ್ ಮೂಲಕ ವ್ಯಾಸಂಗ ಪುಸ್ತಕಗಳನ್ನು ನೋಡಿ ಕಲಿತುಕೊಳ್ಳುವಂತಾಗಿದೆ. ವಿದ್ಯಾರ್ಥಿಗಳೊಂದಿಗೆ ಇತರರೂ ಇದನ್ನು ಬಳಸಿಕೊಳ್ಳುವ ಮೂಲಕ ತಮ್ಮ ಜಾನ ಹೆಚ್ಚಿಸಿಕೊಳ್ಳಬೇಕು ಎಂದರು.
ಗ್ರಾ.ಪA ಅಧ್ಯಕ್ಷ ವೀರಯ್ಯ ಮಠಪತಿ ಮಾತನಾಡಿ, ವಿಶೇಷವಾಗಿ ಐ.ಎ.ಎಸ್, ಐ.ಪಿ.ಎಸ್, ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಸ್ವರ್ಧಿಸಲು ಈ ಗ್ರಂಥಾಲಯವು ಬಹಳ ಅಗತ್ಯವಾಗಿದೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಉನ್ನತ ಹುದ್ದೆಯನ್ನು ಪಡೆಯಬಹುದು ಎಂದು ನುಡಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎಸ್.ವೈ. ಕುಂಬಾರ ಮಾತನಾಡಿ, ಸರ್ಕಾರ ನೀಡಿರುವ ಡಿಜಿಟಲ್ ಗ್ರಂಥಾಲಯವನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿರಿ. ಕಂಪ್ಯೂಟರ್ ಮೂಲಕ ಎಲ್ಲಾ ರೀತಿಯ ಮಾಹಿತಿಗಳನ್ನು ಪಡೆಯಬಹುದು ಎಂದರು.
ಗ್ರಾ.ಪಂ ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು.



