ವಿಜಯಸಾಕ್ಷಿ ಸುದ್ದಿ, ಗದಗ: “ಒಂದು ದೊಡ್ಡ ದೇವಸ್ಥಾನ ಕಟ್ಟುವುದಕ್ಕಿಂತ 10 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ನಿರ್ಮಿಸಿ. ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣವೇ ಸಮಾಜಕ್ಕೆ ನೀಡಬಹುದಾದ ಅತ್ಯುತ್ತಮ ಕೊಡುಗೆ” ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಉದ್ಯಮಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದರು.
ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ, ಖಾಸಗಿ ಶಾಲೆಗಳಿಗೆ ಸಮಾನವಾಗಿ ರೂಪಿಸುವ ಉದ್ದೇಶದಿಂದ ಜಿಲ್ಲೆಯ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (KPS) ಅಭಿವೃದ್ಧಿಪಡಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಅವರು ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಸಿಎಸ್ಆರ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಕ್ಕಳಿಗೆ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಗುಣಮಟ್ಟದ ಉಚಿತ ಶಿಕ್ಷಣ ಒದಗಿಸುವುದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ 20 ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಸುಮಾರು 700ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಕ್ಲಸ್ಟರ್ ಮಾದರಿಯಲ್ಲಿ ಸಂಯೋಜಿಸಿ 37 ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಖಾಸಗಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣ ಉಚಿತವಾಗಿ ದೊರೆಯುವಂತೆ ಮಾಡುವುದೇ ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಿಎಸ್ಆರ್ ನಿಧಿಯನ್ನು ಕೇವಲ ಸಣ್ಣಪುಟ್ಟ ಕಾಮಗಾರಿಗಳಿಗೆ ಸೀಮಿತಗೊಳಿಸದೆ, ಶಾಲಾ ಕಟ್ಟಡ, ಸ್ಮಾರ್ಟ್ ಕ್ಲಾಸ್ರೂಮ್, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಬಸ್ ಸೌಲಭ್ಯ, ಶೌಚಾಲಯ ನಿರ್ಮಾಣ ಹಾಗೂ ಶಿಕ್ಷಕರ ವೇತನ ಸೇರಿದಂತೆ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಮನವಿ ಮಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಜಿಲ್ಲೆಯ ಕೆಪಿಎಸ್ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಫಲಿತಾಂಶ ಶೇ. 80ರಿಂದ ಶೇ. 90ಕ್ಕೂ ಅಧಿಕ ದಾಖಲಾಗುತ್ತಿದ್ದು, ಇನ್ನೂ 37 ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯದ ವಿವರಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಪ್ರತಿಯೊಂದು ಶಾಲೆಗೆ ಅಗತ್ಯವಿರುವ ಕೊಠಡಿಗಳು, ಸ್ಮಾರ್ಟ್ ಕ್ಲಾಸ್ರೂಮ್, ಪ್ರಯೋಗಾಲಯ, ಸಾರಿಗೆ ಸೇರಿದಂತೆ ವಿವಿಧ ಸೌಲಭ್ಯಗಳ ಪಟ್ಟಿಯನ್ನು ಸಿದ್ಧಪಡಿಸಿ, ಕಂಪನಿಗಳಿಗೆ ಕಳುಹಿಸಿ ಸಿಎಸ್ಆರ್ ನೆರವು ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಾ. ಶರಣು ಗೊಗೇರಿ, ವಿವಿಧ ಉದ್ಯಮಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
“ಒಂದು ದೊಡ್ಡ ದೇವಸ್ಥಾನ ಕಟ್ಟುವುದಕ್ಕಿಂತ 10 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಟ್ಟಬೇಕು. ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣವೇ ಸಮಾಜಕ್ಕೆ ನೀಡಬಹುದಾದ ಅತ್ಯುತ್ತಮ ಕೊಡುಗೆ.”
– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ



