Home Gadag News ಇಂತಹ ಕಾಮಗಾರಿಯನ್ನು ಎಲ್ಲಿಯೂ ಕಂಡಿಲ್ಲ!

ಇಂತಹ ಕಾಮಗಾರಿಯನ್ನು ಎಲ್ಲಿಯೂ ಕಂಡಿಲ್ಲ!

0
ಇಂತಹ ಕಾಮಗಾರಿಯನ್ನು ಎಲ್ಲಿಯೂ ಕಂಡಿಲ್ಲ!
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಕಾಮಗಾರಿಯನ್ನು ಇಲ್ಲಿಯ 9ನೇ ವಾರ್ಡಿನಲ್ಲಿ ಅವೈಜ್ಞಾನಿಕವಾಗಿ ನಡೆಸಿ ಕಾಮಗಾರಿಯನ್ನು ಪೂರ್ಣಗೊಳಿಸುವ ಹಂತದಲ್ಲಿದ್ದ ಗುತ್ತಿಗೆದಾರರಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಭರತ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಪ್ರಸಂಗ ಬುಧವಾರ ನಡೆಯಿತು.

ಈ ಕುರಿತು ಜುಲೈ 14ರಂದು 9ನೇ ವಾರ್ಡಿನ ನಾಗರಿಕರು ಗ್ರಾಮ ಪಂಚಾಯಿತಿ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಭರತ್ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಭರತ್ ಅವರು ಗ್ರಾಮದ 9ನೇ ವಾರ್ಡಿಗೆ ಆಗಮಿಸಿ ಜೆ.ಜೆ.ಎಂ. ಕಾಮಗಾರಿಯ ಸ್ಥಳಗಳ ಪರಿಶೀಲನೆ ನಡೆಸಿದರು. ಮಾರುತಿ ದೇವಸ್ಥಾನದಿಂದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೂ ಅವೈಜ್ಞಾನಿಕವಾಗಿ ರಸ್ತೆಯ ಮೇಲೆಯೇ ನೀರು ಪೂರೈಕೆಯ ಪೈಪ್‌ಗಳನ್ನು ಜೋಡಿಸಲಾಗಿದೆ. ಮಾರುತಿ ದೇವಸ್ಥಾನದ ಮುಂದಿರುವ ಗಟಾರಿನಲ್ಲಿ ಎಚ್.ಡಿ.ಪಿ.ಪಿಇ ಪೈಪ್ ಅಳವಡಿಸಿದ್ದನ್ನು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿಯೇ ಇದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಸಿ.ಇ.ಒ ಎಸ್. ಭರತ್ ಅವರು, ಯೋಜನೆಯ ವಿರುದ್ಧ ಕಾವiಗಾರಿ ನಡೆಸಲು ಯಾರು ಹೇಳಿದರು, ರಸ್ತೆಯ ಮೇಲೆ ಪೈಪ್ ಜೋಡಣೆಯ ಕಾಮಗಾರಿಯನ್ನು ದೇಶದ ಯಾವ ಊರಿನಲ್ಲಿಯೂ ಕಂಡಿಲ್ಲ. ಕಾಮಗಾರಿ ಯೋಜನೆಯಂತೆ ನಡೆಯಬೇಕು. ಇದರಲ್ಲಿ ಪ್ರತಿ ಮನೆಗೆ ನೀರು ಪೂರೈಕೆಯ ಬಗ್ಗೆ ಗಮನ ಹರಿಸಬೇಕು. ಪಿ.ಡಿ.ಒ ಅವರು ಈ ಬಗ್ಗೆ ಪೂರ್ಣ ಪ್ರಮಾಣದ ಕಾಳಜಿ ವಹಿಸಬೇಕು. ನಾಳೆಯಿಂದಲೇ ರಸ್ತೆಯ ಹೊರಗಡೆ ಇರುವ ಜೆ.ಐ ಪೈಪನ್ನು ಕಿತ್ತುಹಾಕಿ ರಸ್ತೆಯ ಒಳಗಡೆ ಎಚ್.ಡಿ.ಪಿ.ಪಿ.ಐ ಪೈಪನ್ನು ಅಳವಡಿಸಬೇಕು. ಗಟಾರು ಹೊಳಗಡೆ ಮತ್ತು ಪಕ್ಕಕ್ಕೆ ಹಾಕಿರುವ ಪೈಪ್‌ಲೈನ್‌ನ್ನು ತೆಗೆದು ಹಾಕಿ ಸಂಭಂದಪಟ್ಟ ಯೋಜನೆಯ ಇಂಜಿನಿಯರ್ ಸಲಹೆಯಂತೆ ಕಾಮಗಾರಿಯನ್ನು ನಡೆಸಬೇಕು ಎಂದು ಸೂಚಿಸಿದರು.

ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದರು. ಪಿ.ಡಿ.ಒ ಅಮೀರನಾಯಕ, ಕಾರ್ಯದರ್ಶಿ ಪ್ರದೀಪ ಆಲೂರು, ಗ್ರಾ.ಪಂ ಸದಸ್ಯರಾದ ವೀರಣ್ಣ ಚಕ್ರಸಾಲಿ, ಲಲಿತಾ ಗದಗಿನ, ಮಹಾಂತೇಶ ಕಮತರ, ಕುಬೇರಪ್ಪ ಬೆಂತೂರ, ತಾ.ಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ನಾಗಪ್ಪ ಕುಂಬಾರ, ವೀರಭದ್ರಪ್ಪ ಕುಂಬಾರ, ಶಿವಪ್ಪ ಬಿನ್ನಾಳ ಸೇರಿದಂತೆ ವಾರ್ಡಿನ ನಾಗರಿಕರು ಇದ್ದರು.

“ಗ್ರಾ.ಪಂ ಜನಪ್ರತಿನಿಧಿಗಳು, ಶಾಸಕರು, ಸಚಿವರು ಸೇರಿದಂತೆ ಯಾರ ಒತ್ತಡಕ್ಕೂ ಮಣಿಯದೇ ಪಾರದರ್ಶಕವಾಗಿ ಯೋಜನೆಯಂತೆ ಜೆ.ಜೆ.ಎಂ ಕಾಮಗಾರಿ ನಡೆಯಬೇಕು. ವಿಳಂಬವಾದರೂ ಸರಿ, ಆದರೆ ಕಾಮಗಾರಿಯ ದಿಕ್ಕು ತಪ್ಪಬಾರದು”

– ಎಸ್.ಭರತ್.

ಜಿ.ಪಂ ಸಿ.ಇ.ಒ.

ಕಳೆದ 30 ವರ್ಷಗಳಿಂದ 8-10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಈ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಸಹ ಸಮಸ್ಯೆ ಬಗೆಹರಿದಿಲ್ಲ. ಈಗ ಜೆ.ಜೆ.ಎಂ ಕಾಮಗಾರಿ ಕೂಡ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ಕಾಮಗಾರಿ ಮೂರು ವರ್ಷವಾದರೂ ಪೂರ್ಣಗೊಂಡಿಲ್ಲ. ಹಳೆಯ ಪೈಪ್‌ಲೈನ್ ದುರಸ್ತಿಗೆ ಬಂದರೆ 10-15 ದಿನವಾದರೂ ದುರಸ್ತಿ ಮಾಡುವುದಿಲ್ಲ ಎಂದು ವಾರ್ಡ್ನ ಸಾರ್ವಜನಿಕರು ದೂರಿದರು. ಇದಕ್ಕೆ ಪಿ.ಡಿ.ಒ ಅವರನ್ನು ತರಾಟೆಗೆ ತೆಗೆದುಕೊಂಡ ಸಿ.ಇ.ಒ, ತಕ್ಷಣವೇ ಸಮಸ್ಯೆ ಬಗೆಹರಿಸಬೇಕು. ಅದಕ್ಕೆ ಸಂಪನ್ಮೂಲ ಕೊರೆತೆಯಾದರೆ ನಮ್ಮನ್ನು ಸಂಪರ್ಕ ಮಾಡಬೇಕು ಎಂದು ಸೂಚಿಸಿದರು.


Spread the love

LEAVE A REPLY

Please enter your comment!
Please enter your name here