ವಿಜಯಸಾಕ್ಷಿ ಸುದ್ದಿ, ಗದಗ: ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿರುವ ಗದಗ ಮೀಡಿಯಾ ಕ್ರಿಕೆಟ್ ಲೀಗ್ (GMCL) ಪಂದ್ಯಾವಳಿಯ ಅಂಗವಾಗಿ ಭಾನುವಾರ ನಡೆದ ಎರಡನೇ ಅಭ್ಯಾಸ ಪಂದ್ಯಾವಳಿಯಲ್ಲಿ ಪತ್ರಕರ್ತ ಎಚ್.ಎಂ. ಶರೀಫನವರ್ ನೇತೃತ್ವದ ನೈಟ್ ರೈಡರ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆಯಿತು.
ನಾಲ್ಕು ತಂಡಗಳಾದ ನೈಟ್ ರೈಡರ್ಸ್, ರೂರಲ್ ಕಿಂಗ್ಸ್, ಆರ್ಸಿಬಿ ಹಾಗೂ ವಿನ್ನರ್ಸ್ ನಡುವೆ ನಡೆದ ಪಂದ್ಯಾವಳಿಯಲ್ಲಿ ನೈಟ್ ರೈಡರ್ಸ್ ತಂಡ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದರೆ, ಫೈನಲ್ನಲ್ಲಿ ರೂರಲ್ ಕಿಂಗ್ಸ್ ವಿರುದ್ಧ ಕೇವಲ 2 ರನ್ಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿತು.
ಆರ್ಸಿಬಿಗೆ ವಿಕೆಟ್ ನಷ್ಟವಿಲ್ಲದೆ ಸೋಲು
ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ನೈಟ್ ರೈಡರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ನಿಗದಿತ 10 ಓವರ್ಗಳಲ್ಲಿ 82 ರನ್ ಗಳಿಸಿತು. ತಂಡದ ಪರ ಆರಂಭಿಕರಾದ ವಿನಾಯಕ ಚೌಡಾಪುರ 18 ಹಾಗೂ ವೀರೇಶ ಉಮನಾಬಾದಿ 13 ರನ್ ಗಳಿಸಿದರು.
ನೈಟ್ ರೈಡರ್ಸ್ ಪರ ಅರುಣಕುಮಾರ ಹಿರೇಮಠ 2 ವಿಕೆಟ್, ಸುರೇಶ ಕಡ್ಲಿಮಟ್ಟಿ ಹಾಗೂ ಮಂಜು ಪತ್ತಾರ ತಲಾ ಒಂದು ವಿಕೆಟ್ ಪಡೆದರು.
82 ರನ್ಗಳ ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ಕೇವಲ 6 ಓವರ್ಗಳಲ್ಲೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗಡಿ ತಲುಪಿತು. ನಾಯಕ ಸುರೇಶ ಕಡ್ಲಿಮಟ್ಟಿ 48 ಹಾಗೂ ಆರಂಭಿಕ ಉಮೇಶ ಸಜ್ಜನ 22 ರನ್ ಗಳಿಸಿ ಅಜೇಯರಾಗಿ ಉಳಿದರು.
ವಿನ್ನರ್ಸ್ ವಿರುದ್ಧ ರೂರಲ್ ಕಿಂಗ್ಸ್ ಅಬ್ಬರ
ಎರಡನೇ ಪಂದ್ಯದಲ್ಲಿ ವಿನ್ನರ್ಸ್ ತಂಡವನ್ನು ರೂರಲ್ ಕಿಂಗ್ಸ್ 9 ವಿಕೆಟ್ಗಳಿಂದ ಮಣಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿನ್ನರ್ಸ್ ತಂಡ 10 ಓವರ್ಗಳಲ್ಲಿ 93 ರನ್ ಗಳಿಸಿತು. ಅನಿಲ ತೆಂಬದಮನಿ 25, ಅಶೋಕ 17 ಹಾಗೂ ಶಂಭು 12 ರನ್ ಗಳಿಸಿದರು.
ರೂರಲ್ ಕಿಂಗ್ಸ್ ಪರ ಸಂಜೀವ ಪಾಂಡ್ರೆ 3, ನಿಂಗನಗೌಡ ಹನಮಗೌಡ್ರ 2 ಹಾಗೂ ಶಿವಾನಂದ ಹಿರೇಮಠ 1 ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ರೂರಲ್ ಕಿಂಗ್ಸ್ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಆರಂಭಿಕರಾದ ಶಿವಾನಂದ ಹಿರೇಮಠ 48 ಹಾಗೂ ನಿಂಗನಗೌಡ ಹನಮಗೌಡ್ರ 31 ರನ್ ಗಳಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
2 ರನ್ಗಳ ರೋಚಕ ಗೆಲುವು; ಸೋಲಿಗೆ ಸೇಡು
ಬಳಿಕ ನಡೆದ ನೈಟ್ ರೈಡರ್ಸ್ ಹಾಗೂ ರೂರಲ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯವೇ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ಭಾನುವಾರ ರೂರಲ್ ಕಿಂಗ್ಸ್ ವಿರುದ್ಧ ಕಂಡಿದ್ದ ಸೋಲಿಗೆ ನೈಟ್ ರೈಡರ್ಸ್ ತಂಡ ಈ ಪಂದ್ಯದಲ್ಲಿ ಕೇವಲ 2 ರನ್ಗಳ ಅಂತರದ ಗೆಲುವಿನ ಮೂಲಕ ಸೇಡು ತೀರಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್ ತಂಡ ನಿಗದಿತ 10 ಓವರ್ಗಳಲ್ಲಿ 89 ರನ್ ಗಳಿಸಿತು. ಅರುಣಕುಮಾರ ಹಿರೇಮಠ 25, ಉಮೇಶ ಸಜ್ಜನ 17, ಮಂಜು ಪತ್ತಾರ 13 ಹಾಗೂ ಸಂಗನಗೌಡ ಖಾನಪ್ಪಗೌಡ್ರ 11 ರನ್ ಗಳಿಸಿದರು.
ರೂರಲ್ ಕಿಂಗ್ಸ್ ಪರ ಸಂಜೀವ ಪಾಂಡ್ರೆ 2 ವಿಕೆಟ್, ಶಿವಾನಂದ ಹಿರೇಮಠ ಹಾಗೂ ನಿಂಗನಗೌಡ ಹನಮಗೌಡ್ರ ತಲಾ ಒಂದು ವಿಕೆಟ್ ಪಡೆದರು.
89 ರನ್ಗಳ ಗುರಿ ಬೆನ್ನತ್ತಿದ ರೂರಲ್ ಕಿಂಗ್ಸ್ ತಂಡ 10 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಶುರಾಮ ಹಳ್ಳದ 26, ಪ್ರಕಾಶ ಗುದ್ದಿನ 20 ಹಾಗೂ ನಿಂಗನಗೌಡ ಹನಮಗೌಡ್ರ 10 ರನ್ ಗಳಿಸಿದರು.
ನೈಟ್ ರೈಡರ್ಸ್ ಪರ ಸುರೇಶ ಕಡ್ಲಿಮಟ್ಟಿ ಹಾಗೂ ಉಮೇಶ ಸಜ್ಜನ ತಲಾ 2 ವಿಕೆಟ್, ಮಂಜು ಪತ್ತಾರ ಹಾಗೂ ಸಂಗನಗೌಡ ಖಾನಪ್ಪಗೌಡ್ರ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಹಿರಿಯ ವರದಿಗಾರರಾದ ಅನಂತ ಕಾರ್ಕಳ, ಅನಿಲ ತೆಂಬದಮನಿ, ಸುನಿಲ ತೆಂಬದಮನಿ, ಸಂಪಾದಕರಾದ ಎಚ್.ಎಂ. ಶರೀಫನವರ್, ಜಗದೀಶ್ ಎಸ್.ಪಿ., ಆನಂದ ಸಾಲಿಗ್ರಾಮ ಸೇರಿದಂತೆ ಸಂಪಾದಕರು, ವರದಿಗಾರರು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.
ಗದಗ ಮೀಡಿಯಾ ಕ್ರಿಕೆಟ್ ಲೀಗ್ನ ಕ್ರೀಡಾ ಸಮಿತಿ ಪದಾಧಿಕಾರಿಗಳಾದ ವೆಂಕಟೇಶ ಇಮರಾಪುರ, ಸಂತೋಷ ಕೊಣ್ಣೂರ ಹಾಗೂ ರುದ್ರಗೌಡ ಪಾಟೀಲ ಸೇರಿದಂತೆ ಹಲವರು ಪಂದ್ಯಾವಳಿಯ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದರು.
ತಂಡದ ಎಲ್ಲ ಆಟಗಾರರ ಪರಿಶ್ರಮವೇ ಗೆಲುವಿಗೆ ಕಾರಣ
“ನಮ್ಮ ತಂಡದ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ವಿಜೇತ ತಂಡವಾಗಿ ಹೊರಹೊಮ್ಮಲು ಕಾರಣರಾಗಿದ್ದಾರೆ. ದಿನನಿತ್ಯದ ಅಭ್ಯಾಸದಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಒಟ್ಟಾರೆಯಾಗಿ ಕ್ರೀಡಾ ಮನೋಭಾವದಿಂದ ನಾಲ್ಕು ತಂಡಗಳ ಮಾಲೀಕರು, ನಾಯಕರು ಹಾಗೂ ಆಟಗಾರರು ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ನಾಲ್ಕೂ ತಂಡಗಳು ಮತ್ತಷ್ಟು ಉತ್ತಮ ಪ್ರದರ್ಶನ ನೀಡಲಿ.”
– ಎಚ್.ಎಂ. ಶರೀಫನವರ್, ನೈಟ್ ರೈಡರ್ಸ್ ತಂಡದ ಮಾಲೀಕರು



