HomeKarnataka Newsಶಿವಮೊಗ್ಗದಲ್ಲಿ ನಾಳೆ ಹಿಂದೂ ಮಹಾ ಗಣಪತಿ ವಿಸರ್ಜನೆ; 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ!

ಶಿವಮೊಗ್ಗದಲ್ಲಿ ನಾಳೆ ಹಿಂದೂ ಮಹಾ ಗಣಪತಿ ವಿಸರ್ಜನೆ; 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ!

For Dai;y Updates Join Our whatsapp Group

ಶಿವಮೊಗ್ಗ: ಶಿವಮೊಗ್ಗ ನಗರದ ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮ ನಾಳೆ, ಸೆಪ್ಟೆಂಬರ್ 25ರಂದು ನಡೆಯಲಿದೆ.

ವಿಸರ್ಜನೆಗೂ ಮುನ್ನ ನಗರದಲ್ಲಿ 82ನೇ ವರ್ಷದ ಹಿಂದೂ ಸಂಘಟನಾ ಮಹಾಮಂಡಲದ ವತಿಯಿಂದ ಬೃಹತ್ ರಾಜಬೀದಿ ಉತ್ಸವ ನಡೆಯಲಿದೆ.

ಬೆಳಗ್ಗೆ ಸುಮಾರು 10.30ಕ್ಕೆ ಶೋಭಾಯಾತ್ರೆ ಆರಂಭವಾಗಲಿದ್ದು, ವಿವಿಧ ಕಲಾ ತಂಡಗಳು, ವಾದ್ಯ ಮೇಳಗಳು ಮತ್ತು ಡಿಜೆ ಸೌಂಡ್ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಅಲಂಕಾರ ಮಾಡಲಾಗಿದೆ. ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಆಂಜನೇಯ ಸ್ವಾಮಿ ಎದೆ ಸೀಳಿ ಶ್ರೀರಾಮ ಮತ್ತು ಸೀತಾಮಾತೆಯ ದರ್ಶನ ನೀಡುತ್ತಿರುವಂತೆ ವಿಶೇಷ ಅಲಂಕಾರ ಮಾಡಲಾಗಿದೆ.

ಶೋಭಾಯಾತ್ರೆ ಸಾಗುವ ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್, ನೆಹರು ರಸ್ತೆ, ಟಿ.ಶೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಬಿ.ಆರ್. ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ವೀರ ಶಿವಮೂರ್ತಿ ವೃತ್ತ, ಸರ್.ಎಂ. ವಿಶ್ವೇಶ್ವರಯ್ಯ ರಸ್ತೆ, ಮಹಾವೀರ ವೃತ್ತ, ಕುವೆಂಪು ರಂಗಮಂದಿರ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ ಹಾಗೂ ಬಿ.ಹೆಚ್. ರಸ್ತೆಯ ಮೂಲಕ ಮೆರವಣಿಗೆ ಸಾಗಲಿದೆ.

ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ಬದಲಾವಣೆ ಮಾಡಲಾಗಿದೆ. ಭದ್ರತೆಗಾಗಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ. ಪೊಲೀಸ್ ಇಲಾಖೆ ನೀಡಿದ ಮಾಹಿತಿಯಂತೆ 3 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಭದ್ರತಾ ವ್ಯವಸ್ಥೆಯಲ್ಲಿ 5 ಮಂದಿ ಎಸ್‌ಪಿ ಶ್ರೇಣಿಯ ಅಧಿಕಾರಿಗಳು, 22 ಡಿವೈಎಸ್‌ಪಿ, 84 ಸಿಪಿಐ, 289 ಪಿಎಸ್‌ಐ ಹಾಗೂ ತರಬೇತಿ ಪಿಎಸ್‌ಐ, 108 ಎಎಸ್‌ಐ ಮತ್ತು 2,134 ಹೆಡ್ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ 600 ಹೋಂ ಗಾರ್ಡ್‌ಗಳು, ಕೆಎಸ್‌ಆರ್‌ಪಿ, ಡಿಎಆರ್, ಕ್ಯೂಆರ್‌ಟಿ, ಆರ್‌ಎಎಫ್ ಹಾಗೂ ಇತರೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮೆರವಣಿಗೆಯ ಮೇಲ್ವಿಚಾರಣೆಗಾಗಿ ಸುಮಾರು 3,500 ಸಿಸಿ ಕ್ಯಾಮೆರಾಗಳು ಹಾಗೂ 12 ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ತುರ್ತು ಪರಿಸ್ಥಿತಿಗಾಗಿ 7 ಅಗ್ನಿಶಾಮಕ ವಾಹನಗಳು ಮತ್ತು 4 ಅಂಬ್ಯುಲೆನ್ಸ್‌ಗಳನ್ನು ಸಿದ್ಧವಾಗಿರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ 35 ಮಂದಿಯನ್ನು ಗಡಿಪಾರು ಮಾಡಲಾಗಿದೆ ಎಂದು ಎಸ್‌ಪಿ ನಿಖಿಲ್ ತಿಳಿಸಿದ್ದಾರೆ.

ಶಾಲೆಗಳ ಸಮಯದಲ್ಲೂ ಬದಲಾವಣೆ:

ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯ ಶಾಲೆಗಳ ಅವಧಿಯಲ್ಲೂ ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸೆಪ್ಟೆಂಬರ್ 25ರಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಮಾತ್ರ ತರಗತಿಗಳು ಮತ್ತು ಪರೀಕ್ಷೆಗಳು ನಡೆಯಲಿವೆ.

ಮಧ್ಯಾಹ್ನದ ನಂತರ ಶಿವಮೊಗ್ಗ ನಗರ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡುವಂತೆ ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ಮುಂದುವರಿಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img