ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಯೊಬ್ಬರಿಗೆ ಹೈದರಾಬಾದ್ ಮೂಲದ ವ್ಯಕ್ತಿ ವಂಚಿಸಿರುವ ಆರೋಪ ಕೇಳಿಬಂದಿದೆ.

ಮಹಿಳೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ದುಬಾರಿ ಬೈಕ್ ಹಾಗೂ ಐಫೋನ್ ಉಡುಗೊರೆಯಾಗಿ ಪಡೆದುಕೊಂಡು ಬಳಿಕ ಸಂಪರ್ಕ ಕಡಿತಗೊಳಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಸ್ ನಿಲ್ದಾಣದಲ್ಲಿ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು!
ಸಂತ್ರಸ್ತ ಮಹಿಳೆ ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಮದುವೆಯಾಗಿದ್ದ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಯೊಂದಿಗಿನ ಮನಸ್ತಾಪದ ಹಿನ್ನೆಲೆಯಲ್ಲಿ 2026ರ ಮಾರ್ಚ್ನಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 11ನೇ ತರಗತಿ ಓದುತ್ತಿರುವ ಮಗನೊಂದಿಗೆ ಕೆ.ಜಿ. ಹಳ್ಳಿ ಪ್ರದೇಶದಲ್ಲಿ ವಾಸವಾಗಿದ್ದರು.
ಈ ನಡುವೆ ಮೇ ತಿಂಗಳಲ್ಲಿ ಬಸ್ ನಿಲ್ದಾಣವೊಂದರಲ್ಲಿ ಶೇಖ್ ಮೊಹಮ್ಮದ್ ತೈಯೀಬ್ ಪರಿಚಯವಾಗಿದ್ದ. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ನಂಬಿಸಿದ್ದ ತಾಹೀರ್, ಮಹಿಳೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಆರೋಪಿಸಲಾಗಿದೆ.
ದುಬಾರಿ ಗಿಫ್ಟ್ ಪಡೆದ ಬಳಿಕ ಮದುವೆಗೆ ನಿರಾಕರಣೆ!
ಸುಮಾರು ಐದು ತಿಂಗಳ ಕಾಲ ಮಹಿಳೆಯೊಂದಿಗೆ ಪ್ರೀತಿಯಲ್ಲಿದ್ದ ತಾಹೀರ್, ಆಕೆಯಿಂದ ದುಬಾರಿ ಬೈಕ್ ಹಾಗೂ ಐಫೋನ್ ಉಡುಗೊರೆಯಾಗಿ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿ ಮಹಿಳೆಯಿಂದ ದೂರವಾಗಿದ್ದಾನೆ. ಅಷ್ಟೇ ಅಲ್ಲ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ.
ಹೈದರಾಬಾದ್ವರೆಗೂ ಹುಡುಕಾಡಿದ ಮಹಿಳೆ!
ಪ್ರಿಯಕರ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಮಹಿಳೆ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಹೈದರಾಬಾದ್ನಲ್ಲಿರುವ ತಾಹೀರ್ ಮನೆಗೂ ತೆರಳಿ ವಿಚಾರಿಸಿದ್ದಾರೆ. ಆದರೆ ಆತ ಅಲ್ಲಿ ಕೂಡ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಬೇರೆ ದಾರಿ ಕಾಣದೆ ಕೊನೆಗೆ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ, ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ವಿರುದ್ಧ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.









