ಭೋಪಾಲ್: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಗಳಿಸಿರುವ ಆರೋಪದ ಮೇರೆಗೆ ಹುಲಿ ಸಂರಕ್ಷಿತ ಅರಣ್ಯದ ಅಧಿಕಾರಿಯೊಬ್ಬರ ಮನೆ ಹಾಗೂ ಕಚೇರಿ ಸೇರಿದಂತೆ ಮೂರು ಸ್ಥಳಗಳ ಮೇಲೆ ಮಧ್ಯಪ್ರದೇಶದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ಬರೋಬ್ಬರಿ ₹7.6 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ನಗದು, ಚಿನ್ನಾಭರಣ, ಬೆಳ್ಳಿ ಹಾಗೂ ಐಷಾರಾಮಿ ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ನಿರ್ದೇಶಕ ಸಂಜೀವ್ ಕುಮಾರ್ ಶರ್ಮಾ ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿ. ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಯ ವೇಳೆ ₹26,36,800 ನಗದು ಪತ್ತೆಯಾಗಿದೆ. ಅಲ್ಲದೆ, ಸುಮಾರು ₹3.5 ಕೋಟಿ ಮೌಲ್ಯದ 2.528 ಕೆ.ಜಿ ಚಿನ್ನ ಹಾಗೂ ₹2.94 ಲಕ್ಷ ಮೌಲ್ಯದ 1.656 ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ದಾಳಿ:
ಸಂಜೀವ್ ಕುಮಾರ್ ಶರ್ಮಾ ಅವರು ತಮ್ಮ ಪತ್ನಿ ಹಾಗೂ ಇತರರೊಂದಿಗೆ ಸೇರಿ ಕಾನೂನುಬದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು.
ಪ್ರಾಥಮಿಕ ವಿಚಾರಣೆ ನಡೆಸಿದ ಅಧಿಕಾರಿಗಳಿಗೆ ಅವರ ಆಸ್ತಿ ತಿಳಿದಿರುವ ಆದಾಯಕ್ಕಿಂತ ಶೇ.228ರಷ್ಟು ಹೆಚ್ಚಾಗಿದೆ ಎಂಬ ಅಂಶ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ನ್ಯಾಯಾಲಯದಿಂದ ಶೋಧ ವಾರಂಟ್ ಪಡೆದು ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ನಾಲ್ಕು ವಾಹನಗಳು, ಐಷಾರಾಮಿ ಗೃಹೋಪಯೋಗಿ ವಸ್ತುಗಳು ಪತ್ತೆ:
ಭೋಪಾಲ್ ವಿಭಾಗದ ಲೋಕಾಯುಕ್ತ ತಂಡಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿವೆ. ಪಚ್ಮಢಿಯಲ್ಲಿರುವ ಶರ್ಮಾ ಅವರ ಸರ್ಕಾರಿ ನಿವಾಸ ಮತ್ತು ಕಚೇರಿ ಹಾಗೂ ಛಿಂದ್ವಾರದಲ್ಲಿರುವ ಖಾಸಗಿ ನಿವಾಸದಲ್ಲಿ ಶೋಧ ನಡೆಸಲಾಗಿದೆ.
ಈ ವೇಳೆ ಸ್ಕಾರ್ಪಿಯೋ, ಮಹೀಂದ್ರಾ KUV, ರಾಯಲ್ ಎನ್ಫೀಲ್ಡ್ ಬುಲೆಟ್ ಹಾಗೂ ಸ್ಕೂಟರ್ ಸೇರಿದಂತೆ ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು ₹31.2 ಲಕ್ಷ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಸುಮಾರು ₹50 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಇನ್ನು ಶರ್ಮಾ ಅವರಿಗೆ ಸಂಬಂಧಿಸಿದ ಮತ್ತೆರಡು ಆಸ್ತಿಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸುಮಾರು ₹2 ಕೋಟಿ ಮೌಲ್ಯದ ‘ಇಕೋಟೆಲ್ ರೆಸಾರ್ಟ್’ ಹಾಗೂ ₹1 ಕೋಟಿ ಮೌಲ್ಯದ ‘ಸೆರೆನಿಟಿ ದಿ ವಿಲ್ಲಾ’ ಆಸ್ತಿಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
28 ಭೂ ವ್ಯವಹಾರಗಳ ದಾಖಲೆ ವಶ:
ಶೋಧ ಕಾರ್ಯಾಚರಣೆ ವೇಳೆ ಭೂ ವ್ಯವಹಾರಗಳಿಗೆ ಸಂಬಂಧಿಸಿದ 28 ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದ್ಯ ಪತ್ತೆಯಾಗಿರುವ ಆಸ್ತಿಗಳ ಪ್ರಾಥಮಿಕ ಮೌಲ್ಯ ಸುಮಾರು ₹7.6 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಅಧಿಕಾರಿಯ ತಿಳಿದಿರುವ ಆದಾಯಕ್ಕಿಂತ ಶೇ.560ರಷ್ಟು ಹೆಚ್ಚಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.
ಆದರೆ, ಹೋಟೆಲ್ ಮತ್ತು ರೆಸಾರ್ಟ್ಗಳ ಅಧಿಕೃತ ಮೌಲ್ಯಮಾಪನ ಇನ್ನೂ ಪೂರ್ಣಗೊಂಡಿಲ್ಲ. ಭೂ ವ್ಯವಹಾರಗಳ ದಾಖಲೆಗಳ ಪರಿಶೀಲನೆಯೂ ಬಾಕಿ ಇದೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಒಟ್ಟು ಆಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.










