HomeGadag Newsಹಾಡುಹಗಲೇ ಯುವಕನ ಭೀಕರ ಹತ್ಯೆ; ಮೂವರು ಪೊಲೀಸರಿಗೆ ಶರಣು!

ಹಾಡುಹಗಲೇ ಯುವಕನ ಭೀಕರ ಹತ್ಯೆ; ಮೂವರು ಪೊಲೀಸರಿಗೆ ಶರಣು!

ಲಕ್ಷ್ಮೇಶ್ವರ: ಪಟ್ಟಣದ ತಟ್ಟಿ ಬಡಾವಣೆಯಲ್ಲಿ ಬುಧವಾರ ಹಾಡುಹಗಲೇ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಜನನಿಬಿಡ ಪ್ರದೇಶದಲ್ಲಿ ನಡೆದ ಕೃತ್ಯದಿಂದ ಪಟ್ಟಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಪಟ್ಟಣದ ಗಡ್ಡದೇವರಮಠ ಬಡಾವಣೆ ನಿವಾಸಿ ಇರ್ಫಾನ್ ತಹಶೀಲ್ದಾರ್ (36) ಹತ್ಯೆಗೀಡಾದ ಯುವಕ. ತಟ್ಟಿ ಬಡಾವಣೆ ಸಮೀಪದಲ್ಲಿ ಘಟನೆ ನಡೆದಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಆನಂದ ಕ್ಯಾರಿಕಟ್ಟಿ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದೋಬಸ್ತ್ ಕೈಗೊಂಡರು.

ಘಟನೆಯ ಮಾಹಿತಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಪ್ರಕರಣದ ಕುರಿತು ಮಾಹಿತಿ ಪಡೆದರು.

ಇನ್ನು ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ತಿಳಿದುಬಂದಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇರ್ಫಾನ್ ಹತ್ಯೆಯ ಹಿಂದಿನ ನಿಖರ ಕಾರಣ, ಆರೋಪಿಗಳ ಪಾತ್ರ ಹಾಗೂ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಮಾರಕಾಸ್ತ್ರಗಳ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಈ ಕುರಿತು ಎಸ್ಪಿ ಮಿಥುನ್ ಎಚ್.ಎನ್. ಅವರು, ಮೂವರು ವ್ಯಕ್ತಿಗಳು ಠಾಣೆಗೆ ಬಂದು ಶರಣಾಗಿದ್ದಾರೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಹತ್ಯೆಯ ಹಿಂದಿನ ಕಾರಣ, ಆರೋಪಿಗಳ ಪಾತ್ರ ಹಾಗೂ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಮಾರಕಾಸ್ತ್ರಗಳ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img