ಬೆಂಗಳೂರು: ಐಪಿಎಲ್ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ 13 ವರ್ಷದ ದಿವ್ಯಾಂಶಿ ಚಿನ್ನದ ಕಿವಿಯೋಲೆ ಹಾಗೂ ಸರ ಕಳ್ಳತನವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ದಿವ್ಯಾಂಶಿಯ ತಾಯಿ ಅಶ್ವಿನಿ, ಬೌರಿಂಗ್ ಆಸ್ಪತ್ರೆಗೆ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ, ದಿವ್ಯಾಂಶಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶವಾಗಾರದೊಳಗೆ ಕೊಂಡೊಯ್ಯುವಾಗ ಆಕೆಯ ಬಳಿ ಚಿನ್ನದ ಕಿವಿಯೋಲೆ (6 ಗ್ರಾಂ) ಮತ್ತು ಚಿನ್ನದ ಸರ (5-6 ಗ್ರಾಂ) ಇತ್ತು. ಆದರೆ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸುವ ವೇಳೆಗೆ ಆಭರಣಗಳು ಕಾಣೆಯಾಗಿದ್ದವು.
ಈ ಬಗ್ಗೆ ಬೌರಿಂಗ್ ಆಸ್ಪತ್ರೆಗೆ ತೆರಳಿ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಶವ ಪರೀಕ್ಷೆ ವೇಳೆ ಯಾರೋ ಚಿನ್ನಾಭರಣ ಕಳ್ಳತನ ಮಾಡಿದ್ಧಾರೆ ಎಂದು ಅಶ್ವಿನಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 174ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.