ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 04-02-2008ರ ನಂತರ ನೇಮಕಗೊಂಡು ಅನುದಾನಕ್ಕೆ ಒಳಪಟ್ಟ 364 ಬಿ.ಇಡಿ ಪದವಿ ಹೊಂದದ್ದ ಉಪನ್ಯಾಸಕರು ವೇತನ ಸಹಿತ ವ್ಯಾಸಂಗ ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆ ಜುಲೈ 24ರಂದು ಅನುಮತಿ ನೀಡಿ ಆದೇಶ ಹೊರಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹಾಗೂ ಭೋಜೇಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಆದೇಶದಿಂದ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಬಿ.ಇಡಿ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ 364 ಉಪನ್ಯಾಸಕರು ನಿಟ್ಟುಸಿರು ಬಿಡುವಂತಾಗಿದೆ. ಉಪನ್ಯಾಸಕರಾಗಿ ಸುಮಾರು 15 ವರ್ಷ ಸೇವೆ ಸಲ್ಲಿಸಿ ತದನಂತರ ವೇತನ ರಹಿತವಾಗಿ 2 ವರ್ಷ ಬಿ.ಇಡಿ ಪದವಿ ವ್ಯಾಸಂಗಕ್ಕೆ ಹೋಗುವುದು ಅವರ ಇಡೀ ಕುಟುಂಬವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದಂತಾಗುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಪದವೀಧರ ಮತಕ್ಷೇತ್ರ ಮತ್ತು ಶಿಕ್ಷಕರ ಮತಕ್ಷೇತ್ರಗಳಿಂದ ಆಯ್ಕೆಯಾದ ಎಲ್ಲಾ ವಿಧಾನ ಪರಿಷತ್ ಸದಸ್ಯರು ಹಾಗೂ ಉಪನ್ಯಾಸಕರ ಸಂಘಟನೆಯವರು ಮುಖ್ಯಮಂತ್ರಿಗಳ ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ತಂದು ಒತ್ತಡ ಹೇರಿದ ಪರಿಣಾಮ ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಹೇಳಿದ್ದಾರೆ.
ಈ ಹಿಂದೆ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಬಿ.ಇಡಿ ಪದವಿ ಹೊಂದದೆ ನೇಮಕಗೊಂಡ ಉಪನ್ಯಾಸಕರಿಗೆ 2 ಬ್ಯಾಚ್‌ಗಳಲ್ಲಿ ವೇತನ ಸಹಿತ ಬಿ. ಇಡಿ. ವ್ಯಾಸಂಗ ಕೈಗೊಳ್ಳಲು ಅನುಮತಿ ನೀಡಿತ್ತು. ಆದಾದ ನಂತರ ಜಿ.ಓ.ಸಿ ಕೋರ್ಸ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ.ಇಡಿ ರಹಿತ ಉಪನ್ಯಾಸಕರಿಗೂ ವೇತನ ಸಹಿತ ವ್ಯಾಸಂಗಕ್ಕೆ ಅನುಮತಿ ನೀಡಿದ ಮಾದರಿಯಲ್ಲಿಯೇ ಸರ್ಕಾರ ಆದೇಶ ಹೊರಡಿಸಿರುವುದು ಉಪನ್ಯಾಸಕರಿಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.



