ಬೆಂಗಳೂರು: ಸಚಿವ ಸ್ಥಾನಕ್ಕೆ ಕೆ.ಎನ್. ರಾಜಣ್ಣ ಅವರು ರಾಜೀನಾಮೆ ನೀಡಿಲ್ಲ, ಬದಲಾಗಿ ಹೈಕಮಾಂಡ್ ಸೂಚನೆಯ ಮೇರೆಗೆ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ ಎಂದು ರಾಜಭವನ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.
ಆರಂಭದಲ್ಲಿ ರಾಜಣ್ಣ ಅವರು ಸ್ವಯಂ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಹೈಕಮಾಂಡ್ ಅವರ ರಾಜೀನಾಮೆ ಪಡೆಯುವುದನ್ನು ಬಯಸದೆ, ನೇರವಾಗಿ ಸಂಪುಟದಿಂದ ವಜಾಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿತ್ತು.
ಹೈಕಮಾಂಡ್‌ನ ಖಡಕ್ ಆದೇಶದಂತೆ, ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರಾದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ್ದಾರೆ.
ಮುಜುಗರ ತಪ್ಪಿಸಲು ರಾಜೀನಾಮೆ ಪತ್ರ
ವಜಾಗೊಳಿಸುವ ಮುಜುಗರವನ್ನು ತಪ್ಪಿಸಲು ರಾಜಣ್ಣ ಅವರು ತಮ್ಮ ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ಮೂಲಕ ಸಿಎಂಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಆದರೆ ಹೈಕಮಾಂಡ್ ಖಡಕ್ ಸೂಚನೆಯ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಪತ್ರವನ್ನು ಅಂಗೀಕರಿಸದೇ ಸಂಪುಟದಿಂದಲೇ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಸಿಎಂ ಶಿಫಾರಸಿನಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಣ್ಣ ಅವರನ್ನು ವಜಾಗೊಳಿಸುವ ಗೆಜೆಟ್ ಅಧಿಸೂಚನೆಗೆ ಸಹಿ ಹಾಕಿದ್ದಾರೆ.



