HomeChikkamagaluruಮನುಷ್ಯನಲ್ಲಿ ಅದ್ಭುತವಾದ ಶಕ್ತಿಯಿದೆ

ಮನುಷ್ಯನಲ್ಲಿ ಅದ್ಭುತವಾದ ಶಕ್ತಿಯಿದೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಮಾತುಗಳಿಗೆ ಕೊಲ್ಲುವ ಶಕ್ತಿ ಮತ್ತು ಕಾಪಾಡುವ ಸಾಮರ್ಥ್ಯವೂ ಇದೆ. ಮಾತುಗಳಲ್ಲಿ ಕರುಣೆ ಹಾಗೂ ನೈಜತೆಯಿದ್ದರೆ ನಮ್ಮ ಬದುಕು ಬದಲಾಗುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರಾವಣ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲು ಇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಜಾಗೃತಗೊಂಡು ಆದರ್ಶ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಮನುಷ್ಯನಲ್ಲಿ ಅದ್ಭುತವಾದ ಶಕ್ತಿಯಿದೆ. ಬೀಜದಿಂದ ವೃಕ್ಷ ಬೆಳೆಯುತ್ತದೆ. ಸುಂದರ ಹೂ ರುಚಿಯಾದ ಹಣ್ಣು ಕೊಡುತ್ತದೆ. ನೆರಳು ಮತ್ತು ಶುದ್ಧವಾದ ಗಾಳಿಯನ್ನು ಸಹ ಕೊಡುತ್ತದೆ. ಮನುಷ್ಯನಲ್ಲಿರುವ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಬಾಳಿದರೆ ಜೀವನ ಉತ್ತುಂಗಕ್ಕೇರುವುದರಲ್ಲಿ ಯಾವ ಸಂಶಯವು ಇಲ್ಲ ಎಂದರು.

ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗುರಿ ಮುಟ್ಟಲೇಬೇಕೆಂಬ ದೃಢ ನಿರ್ಧಾರ ಜೊತೆಗಿದ್ದರೆ ಸೋಲು ನಮ್ಮ ಸಮೀಪ ಸುಳಿಯಲು ಹಿಂಜರಿಯುತ್ತದೆ. ಕಾಲ ಕೆಟ್ಟಿತೆಂದು ಕೆಲವರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ. ಕೆಟ್ಟಿರುವುದು ಜನರ ನಡತೆ ಮತ್ತು ಆಚಾರ-ವಿಚಾರ ಎಂಬುದನ್ನು ನೆನಪಿಡಬೇಕಾಗುತ್ತದೆ. ಸಂಸ್ಕಾರ ಒಂದಿದ್ದರೆ ಸಂಪೂರ್ಣ ಜಗತ್ತನ್ನು ಗೆಲ್ಲಬಹುದು. ಅಹಂಕಾರ ಒಂದಿದ್ದರೆ ಗೆದ್ದ ಜಗತ್ತನ್ನು ಕಳೆದುಕೊಳ್ಳಬಹುದು. ಚುಚ್ಚುವುದು ಸೂಜಿಯ ಗುಣ. ಆದರೆ ದಾರದ ಜೊತೆ ಗೆಳೆತನ ಮಾಡಿದ ಮೇಲೆ ಸೂಜಿಯು ಎಲ್ಲವನ್ನೂ ಜೋಡಿಸಲು ಮುಂದಾಗುತ್ತದೆ. ಒಳ್ಳೆಯತನ ಜೊತೆಗಿದ್ದರೆ ಒಳ್ಳೆಯದೇ ಆಗುವುದೆಂದು ಮಹಾ ಮಾನವತಾವಾದಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ ಎಂದರು.

ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ತಡವಲಗಾ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸಂಸ್ಕೃತ ಪಾಠಶಾಲೆಯಲ್ಲಿ ಉತ್ತೀರ್ಣರಾದ ಶ್ರೀ ಜಗದ್ಗುರು ಶಿವಾನಂದ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಅಂಕಪಟ್ಟಿಯನ್ನು ವಿತರಿಸಿ ಶುಭ ಹಾರೈಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಹಾಗೂ ಪ್ರಾರ್ಥನಾ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಶ್ರಾವಣ ಸೋಮವಾರ ಕ್ಷೇತ್ರದ ಎಲ್ಲ ದೈವಗಳಿಗೆ ಪೂಜೆ ನಡೆಯಿತು. ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶುಭ ಹಾರೈಸಿದರು.

ನೀರಿಗಿಂತ ತಿಳಿಯಾದದ್ದು ಜ್ಞಾನ, ಭೂಮಿಗಿಂತ ಭಾರವಾದದ್ದು ಪಾಪ, ಕಾಡಿಗೆಗಿಂತ ಕಪ್ಪಾಗಿರುವುದು ಕಳಂಕ, ಸೂರ್ಯನಿಗಿಂತ ಪ್ರಖರವಾದದ್ದು ಕೋಪ, ಮಂಜಿಗಿಂತ ಹಗುರವಾದದ್ದು ಪುಣ್ಯ, ಗಾಳಿಗಿಂತ ವೇಗವಾಗಿರುವುದು ಮನಸ್ಸು. ಇವುಗಳನ್ನು ಅರಿತು ಬಾಳಿದರೆ ಬದುಕು ಸಾರ್ಥಕಗೊಳ್ಳುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದನ್ನು ಯಾರೂ ಮರೆಯಲಾಗದು ಎಂದು ಶ್ರೀಗಳು ವಚನಾಮೃತ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!