ವಿಜಯಸಾಕ್ಷಿ ಸುದ್ದಿ, ರೋಣ: ರಾಜ್ಯ ಸರಕಾರ ಅತಿ ಶಿಘ್ರದಲ್ಲಿ 6ನೇ ಗ್ಯಾರಂಟಿಯನ್ನು ಜಾರಿಗೊಳಿಸುವ ಮೂಲಕ ಶಿಕ್ಷಕರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಲಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಗುರುಭವನದಲ್ಲಿ ಜರುಗಿದ ಶಿಕ್ಷಕರ ದಿನಚಾರಣೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಗುರುಭವನದ ಮೇಲ್ಮಹಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯಾದ್ಯಂತ ಹಲವು ವರ್ಷಗಳಿಂದ ಶಿಕ್ಷಕರು ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುತ್ತಾ ಬಂದಿದ್ದರು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಲಾಗುವುದು ಎಂದು ಶಿಕ್ಷಕರಿಗೆ ಭರವಸೆ ನೀಡಿತ್ತು. ಜೊತೆಗೆ ಪಕ್ಷದ ಪ್ರಣಾಳಿಕೆಯಲ್ಲಿಯೂ ಘೋಷಿಸಿತ್ತು. ಅದರಂತೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ಎನ್‌ಪಿಎಸ್ ರದ್ದುಗೊಳಿಸಿ ಅತಿ ಶೀಘ್ರದಲ್ಲಿ ಒಪಿಎಸ್ ಜಾರಿಗೊಳಿಸಲಿದೆ ಎಂದರು.
ಕಳೆದ ಬಾರಿ ಕೊಟ್ಟ ಮಾತಿನಂತೆ ಶಿಕ್ಷಕರ ಭವನದ ಮೇಲ್ಮಹಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, 70 ಲಕ್ಷ ರೂ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಅಗತ್ಯ ಬಿದ್ದಲ್ಲಿ ಮತ್ತಷ್ಟು ಅನುದಾನವನ್ನು ಒದಗಿಸಲಾಗುವುದು. ತಾಲೂಕು ಸೇರಿದಂತೆ ಮತಕ್ಷೇತ್ರದಲ್ಲಿನ ಸರಕಾರಿ ಶಾಲೆಗಳ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದು, ಹೊಸ ಕಟ್ಟಡಗಳ ನಿರ್ಮಾಣಕ್ಕೂ ಅನುದಾನವನ್ನು ಒದಗಿಸಲಾಗಿದೆ ಎಂದರು.
ಗುರುಪಾದ ದೇವರು ಸಾನ್ನಿಧ್ಯ ವಹಿಸಿದ್ದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಬಸ್ಸಮ್ಮ ಕೊಪ್ಪದ, ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ, ಎ.ಸಿ. ಗಂಗಾಧರ, ತಹಸೀಲ್ದಾರ ನಾಗರಾಜ ಕೆ, ತಾ.ಪಂ ಇಒ ಚಂದ್ರಶೇಕರ ಕಂದಕೂರ, ಸಿಪಿಐ ಎಸ್.ಎಸ್. ಬಿಳಗಿ, ಬಿಇಒ ಅರ್ಜುನ ಕಾಂಬೋಗಿ, ಆರ್.ಎಲ್. ನಾಯಕ, ಸಿದ್ದಣ್ಣ ಬಂಡಿ, ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ, ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ಎಚ್.ಎಸ್. ಸೋಂಪುರ, ಶರಣಪ್ಪ ಬೆಟಗೇರಿ, ಬಸವರಾಜ ನವಲಗುಂದ, ವಾಯ್.ಡಿ. ಗಾಣಿಗೇರ, ಮಹೇಶ ಕುರಿ, ಎಂ.ಎ. ಫಣಿಬಂದ, ಸಿ.ಕೆ. ಕೇಸರಿ, ಜಿ.ಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರ ಸಂಘದ ಪ್ರತಿನಿಧಿಗಳು, ರೋಣ, ಗಜೇಂದ್ರಗಡ ತಾಲೂಕಿನ ಶಿಕ್ಷಕರು, ಪುರಸಭೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರ ಸೇವೆ ನಿಜಕ್ಕೂ ಅಭಿನಂದನೀಯ. ಅವರು ನೀಡಿದ ಅಕ್ಷರ ಜ್ಞಾನದಿಂದ ಇಂದು ನಾವೆಲ್ಲ ವಿವಿಧ ಹುದ್ದೇಗಳನ್ನು ಅಲಂಕರಿಸಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ. ನಾನಾಗಲಿ, ನನ್ನ ಮನೆತನವಾಗಲಿ ಶಿಕ್ಷಕರ ಬಗ್ಗೆ ಅತ್ಯಂತ ಪ್ರೀತಿ-ವಿಶ್ವಾಸವನ್ನು ಇಟ್ಟುಕೊಂಡಿದ್ದು, ಶಿಕ್ಷಕರ ಏಳ್ಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.


