ಬೆಂಗಳೂರು: ನಗರದಲ್ಲಿ ಇಂದು ಸಂಜೆ ಏಕಾಏಕಿ ದಿಢೀರ್ ಮಳೆಯಾಗಿದ್ದು, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ವರುಣನ ಆರ್ಭಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದ ಪ್ರಯಾಣಿಕರು ಹಾಗೂ ವಾಹನ ಸವಾರರು ಮಳೆಯ ಹೊಡೆತಕ್ಕೆ ಸಿಲುಕಿ ಪರದಾಟ ನಡೆಸಿದ್ದಾರೆ. ಬಸ್ ನಿಲ್ದಾಣಗಳು, ಅಂಗಡಿ ಮುಂಗಟ್ಟುಗಳು ಮತ್ತು ಮೆಟ್ರೋ ನಿಲ್ದಾಣಗಳ ಬಳಿ ಜನರು ಆಶ್ರಯ ಪಡೆದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿದೆ.
ಮೆಜೆಸ್ಟಿಕ್, ವಸಂತನಗರ, ಕೆ.ಆರ್. ಸರ್ಕಲ್, ವಿಜಯನಗರ, ಜಯನಗರ, ಬನಶಂಕರಿ, ಕೆಂಗೇರಿ, ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ, ಬಸವನಗುಡಿ, ಕೋರಮಂಗಲ, ಹೆಚ್‌ಎಸ್‌ಆರ್ ಲೇಔಟ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಧಾರಾಕಾರ ಮಳೆ ದಾಖಲಾಗಿದೆ.
ಭಾಗ್ಮನೆ ಟೆಕ್ ಪಾರ್ಕ್ ಹಾಗೂ ಮಾರತಹಳ್ಳಿ ಸುತ್ತಮುತ್ತ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ದೇವರಬೀಸನಹಳ್ಳಿ ಮೇಲ್ಸೇತುವೆ ರ್ಯಾಂಪ್‌ನಲ್ಲಿ ನೀರು ಜಮಾವಣೆಯಾದ ಕಾರಣ ಕಡುಬೀಸನಹಳ್ಳಿಯಿಂದ ಬೆಳ್ಳಂದೂರು ಮಾರ್ಗದಲ್ಲಿ ಸಂಚಾರ ನಿಧಾನಗೊಂಡಿದೆ.
ಇತ್ತ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲೂ ಭಾರೀ ಮಳೆಯಾಗಿದ್ದು, ಗುಡುಗು ಸಹಿತ ವರುಣನ ಆರ್ಭಟದಿಂದ ನವದೆಹಲಿಯಿಂದ ಆಗಮಿಸಿದ್ದ ಇಂಡಿಗೋ ವಿಮಾನವು ಲ್ಯಾಂಡಿಂಗ್ ವಿಳಂಬವಾಗಿ ಕೆಲ ಕಾಲ ಆಕಾಶದಲ್ಲೇ ಸುತ್ತಾಡಿದ ಘಟನೆ ನಡೆದಿದೆ. ಪ್ರಯಾಣಿಕರು ಮಳೆಯ ಕಾರಣದಿಂದ ತೀವ್ರ ಅಸೌಕರ್ಯ ಅನುಭವಿಸಿದ್ದಾರೆ.



