ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಯಾಸ ಹಡಗಲಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಕರ‍್ಯವನ್ನು ಮುಗಿಸಿಕೊಂಡು ಬೆಳವಣಕಿ ಆರೋಗ್ಯ ಕೇಂದ್ರಕ್ಕೆ ವಾಪಸ್ಸಾಗುತ್ತಿದ್ದಾಗ ಬೆಣ್ಣೆಹಳ್ಳದ ಪಕ್ಕ ಯಾಸ ಹಡಗಲಿ ಹಾಗೂ ಕೌಜಗೇರಿ ಗ್ರಾಮದ ನಡುವಿನ ಈರುವೆ ಹಳ್ಳಕ್ಕೆ ಆರೋಗ್ಯ ಇಲಾಖೆಯ ಮೂವರು ಸಿಬ್ಬಂದಿಗಳು ಹಳ್ಳದಲ್ಲಿ ಸಿಲುಕಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ರೋಣ ತಾಲೂಕಿನಲ್ಲಿ ಮಂಗಳವಾರ ಮಧ್ಯಾಹ್ನ ಭಾರೀ ಮಳೆ ಸುರಿದ ಹಿನ್ನೆಲೆ ಈರುವೆ ಹಳ್ಳ ತುಂಬಿ ಹರಿದಿದೆ. ಯಾಸ ಹಡಗಲಿ ಗ್ರಾಮದಲ್ಲಿ ನಡೆದ ಆರೋಗ್ಯ ಶಿಬಿರವನ್ನು ಮುಗಿಸಿಕೊಂಡು ಎಂದಿನಂತೆ ಬೆಳವಣಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಮುದಾಯ ಆರೋಗ್ಯ ಅಧಿಕಾರಿ ಬಸವರಾಜ ಕಡಪಟ್ಟಿ (34), ಹಿರಿಯ ಆರೋಗ್ಯ ಅಧಿಕಾರಿ ವೀರಸಂಗಯ್ಯ ಹಿರೇಮಠ (49), ಕಿರಿಯ ಆರೋಗ್ಯ ಸಹಾಯಕಿ ಬಸಮ್ಮ ಗುರಿಕಾರ (32) ದ್ವಿಚಕ್ರ ವಾಹನದಲ್ಲಿ ವಾಪಸ್ ಬರುತ್ತಿದ್ದರು.
ಈ ಸಂರ‍್ಭ ಹಳ್ಳ ತುಂಬಿ ಹರಿಯುತ್ತಿತ್ತು. ನೀರಿನ ರಭಸಕ್ಕೆ ನಿಯಂತ್ರಣ ತಪ್ಪಿದ ವಾಹನ ಹಳ್ಳಕ್ಕೆ ಬಿದ್ದಿದ್ದು, ಇಬ್ಬರು ಪುರುಷ ಸಿಬ್ಬಂದಿಗಳು ಈಜಿ ದಡ ಸೇರಿದ್ದಾರೆ. ಅವರಿಗೆ ರೋಣ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಹಿಳಾ ಸಿಬ್ಬಂದಿ ಬಸಮ್ಮ ಗುರಿಕಾರ ನಾಪತ್ತೆಯಾಗಿದ್ದಾರೆ.
ಜಿಟಿಜಿಟಿ ಮಳೆಯ ನಡುವೆಯೇ ಅಗ್ನಿಶಾಮಕ, ಎನ್‌ಡಿಆರ್‌ಎಫ್, ಪೊಲೀಸ್, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪತ್ತೆ ಕರ‍್ಯ ನಡೆಸಿದರೂ ಬಸ್ಸಮ್ಮ ಗುರಿಕಾರರ ಸುಳಿವು ಪತ್ತೆಯಾಗಿಲ್ಲ. ಹಳ್ಳದ ಸುತ್ತಲೂ ಕತ್ತಲು ಆವರಿಸಿದ್ದರಿಂದ ಕಾರ‍್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಬಸಮ್ಮ ಗುರಿಕಾರರ ಹುಡುಕಾಟಕ್ಕೆ ಗ್ರಾಮಸ್ಥರೂ ಕೈಜೋಡಿಸಿದರು. ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಿ.ಎಸ್. ನಿಲಗುಂದ, ತಹಸೀಲ್ದಾರ ನಾಗರಾಜ ಕೆ. ಭೇಟಿ ನೀಡಿ ಪರಿಶೀಲಿಸಿದರು.
“ಮಳೆ ಅಬ್ಬರ ಜೋರಾಗಿದೆ. ಹಳ್ಳವೂ ರ‍್ತಿಯಾಗಿದ್ದು, ತುಂಬಿ ಹರಿಯುತ್ತಿದೆ. ಮಳೆಯ ನಡುವೆಯೇ ಕರ‍್ಯಾಚರಣೆ ನಡೆಸಿದರೂ ಫಲ ಸಿಗಲಿಲ್ಲ. ಮತ್ತೆ ಬುಧವಾರ ಬೆಳಗಿನ ಜಾವ ಮಹಿಳಾ ಸಿಬ್ಬಂದಿ ಬಸಮ್ಮ ಗುರಿಕಾರರ ಪತ್ತೆ ಕಾರ‍್ಯಾಚರಣೆಯನ್ನು ನಡೆಸಲಿದ್ದೇವೆ.”
— ನಾಗರಾಜ ಕೆ., ತಹಸೀಲ್ದಾರರು, ರೋಣ
ತಾಲೂಕಿನಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಮಳೆಯ ಅಬ್ಬರ ಜೋರಾಗಿತ್ತು. ಅಲ್ಲದೆ ರೋಣ-ಬದಾಮಿ ರಸ್ತೆ ಪ್ರದೇಶದಲ್ಲಿಯೂ ವಿಪರೀತ ಮಳೆ ಸುರಿದಿದ್ದು, ಜಮೀನುಗಳಲ್ಲಿ ಹೊಳೆಯಂತೆ ನೀರು ಹರಿದಿದೆ. ತಾಲೂಕಿನಾದ್ಯಾಂತ ವ್ಯಾಪಕವಾಗಿ ಸುರಿದ ಮಳೆಯಿಂದ ಜಮೀನುಗಳಲ್ಲಿನ ಒಡ್ಡು-ಒಳಗಟ್ಟಿಗಳು ಸಹ ಕಿತ್ತುಹೋಗಿವೆ. ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಮಳೆಯ ನೀರಲ್ಲಿ ಮುಳುಗಿ ನಷ್ಟ ಸಂಭವಿಸಿದೆ.



