ಉಡುಪಿ: 9ನೇ ತರಗತಿ ವಿದ್ಯಾರ್ಥಿಯನ್ನು ಅಪಹರಿಸಿ ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ದುಡಿಸಿಕೊಂಡ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ವಿಖ್ಯಾತ್ ಆಚಾರ್ಯ (19) ಮತ್ತು ಸುಚಿತ್ ನಾಯಕ್ (20) ಅವರನ್ನು ಬಂಧಿಸಲಾಗಿದ್ದು, ಓರ್ವ ಬಾಲಾಪರಾಧಿಯನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಅಪ್ರಾಪ್ತ ಬಾಲಕನನ್ನು ವುಡ್ ಕಂಪನಿಯೊಂದರಲ್ಲಿ ಕೆಲಸ ಮಾಡಿಸಿದ್ದು ಮಾತ್ರವಲ್ಲದೆ, ಮನೆಗೆ ಕಳುಹಿಸಲು ನಿರಾಕರಿಸಿ ವೈರ್ನಿಂದ ಹಲ್ಲೆ ನಡೆಸಿ, ಚೂರಿ ತೋರಿಸಿ ಜೀವ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಾವರ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ಪ್ರಕರಣದ ಸಂಪೂರ್ಣ ಜಾಲವನ್ನು ಬಯಲಿಗೆಳೆಯಲು ತನಿಖೆ ತೀವ್ರಗೊಳಿಸಿದ್ದಾರೆ.



