ಸಾಹಸಸಿಂಹ ಡಾ.ವಿಷ್ಣುವರ್ಧನ್ ಬರ್ತಡೇಗೆ ಇನ್ನೂ ಕೆಲವೇ ದಿನಗಳು ಮಾತ್ರ ಭಾಕಿ ಇದೆ. ಈ ಮಧ್ಯೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣು ಸಮಾಧಿ ರಾತ್ರೋ ರಾತ್ರಿ ನೆಲಸಮ ಮಾಡಲಾಗಿದ್ದು ವಿಷ್ಣು ಸಮಾಧಿ ಜಾಗವನ್ನು ತಮಗೆ ನೀಡುವಂತೆ ಅಭಿಮಾನಿಗಳು ಬೇಡಿಕೆ ಇಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ. ವಿಷ್ಣು ಹುಟ್ಟುಹಬ್ಬವನ್ನು ಸಮಾಧಿ ಜಾಗದಲ್ಲಿ ಆಚರಿಸಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಕೋರ್ಟ್ ತಡೆ ನೀಡಿದೆ. ವಿಷ್ಣುವರ್ಧನ್ ಸಮಾಧಿ ಜಾಗದಲ್ಲಿ ಹುಟ್ಟುಹಬ್ಬ ಆಚರಿಸದಂತೆ ಕೋರ್ಟ್ ಆದೇಶ ನೀಡಿದೆ. ಈ ಮಧ್ಯೆ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
‘ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕುಟುಂಬದ ವಿರುದ್ಧ ನಕಾರಾತ್ಮಕ ಕಾಮೆಂಟ್ಗಳು ಬರುತ್ತಿವೆ. ನಾನು ಹಿಂದೆ ಕೂಡ ಅಭಿಮಾನಿಗಳ ಸಮ್ಮುಖದಲ್ಲಿ, ಮಾಧ್ಯಮದ ಎದುರು ಎಚ್ಚರಿಕೆ ನೀಡಿದ್ದೆ. ಇದೇ ತರಹದ ಕಾಮೆಂಟ್ಗಳು ಬರುತ್ತಿದ್ದರೆ ಅಂಥವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದಿದ್ದೆ. ಆದರೂ ಕೂಡ ಈ ಕಾಮೆಂಟ್ಗಳು ನಿಲ್ಲುತ್ತಿಲ್ಲ’ ಎಂದು ಅನಿರುದ್ಧ್ ಹೇಳಿದ್ದಾರೆ.
‘ಸೆಪ್ಟೆಂಬರ್ 16ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇನೆ. ಇದನ್ನು ಮತ್ತೆ ಮುಂದುವರಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಇನ್ನೊಂದು ಬಾರಿ ಕೈ ಮುಗಿದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ, ವೇದಿಕೆ ಮೇಲೆ ಈ ರೀತಿ ಕಮೆಂಟ್ ಮಾಡಿ ಸಮಸ್ಯೆ ತಂದುಕೊಳ್ಳಬೇಡಿ’ ಎಂದು ಮನವಿ ಮಾಡಿದ್ದಾರೆ.
ನಾಳೆ ಅಂದರೆ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಜನ್ಮದಿನ. ಅವರು ಬದುಕಿದ್ದರೆ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.



