ಬೆಂಗಳೂರು: ನವಿಲು ಗರಿಗಳನ್ನು ಬಳಸಿಕೊಂಡು ಮಾಡಿದ್ದ ‘ಹೇ ನವಿಲೇ’ ಇನ್‌ಸ್ಟಾಗ್ರಾಮ್ ರೀಲ್ಸ್ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನಟಿ ನಿವೇದಿತಾ ಗೌಡ ಮತ್ತು ಇನ್‌ಫ್ಲುಯೆನ್ಸರ್ ಕಿಶನ್ ಬಿಳಗಲಿ ಕ್ಷಮೆಯಾಚನೆ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ್ದಾರೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ನಿವೇದಿತಾ ಗೌಡ, “ವನ್ಯಜೀವಿಗಳಿಗೆ ಸಂಬಂಧಿಸಿದ ಗರಿಗಳು ಅಥವಾ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಬಳಸುವುದು ಮತ್ತು ಅದರಿಂದ ಕಂಟೆಂಟ್ ಸೃಷ್ಟಿಸುವುದು ಕಾನೂನುಬಾಹಿರ ಎಂಬ ಅರಿವು ನಮಗೆ ಇರಲಿಲ್ಲ. ಈ ತಪ್ಪಿನಿಂದ ಇತರರು ಪಾಠ ಕಲಿಯಬೇಕು” ಎಂದು ಹೇಳಿದ್ದಾರೆ.
ಇನ್ನೊಂದೆಡೆ ಕಿಶನ್ ಬಿಳಗಲಿ, “ವಿಡಿಯೋ ನಿರ್ಮಾಣದ ವೇಳೆ ಬಳಸಿದ ನವಿಲು ಗರಿಗಳನ್ನು ಬಾಡಿಗೆಗೆ ಪಡೆದಿದ್ದೆವು. ಆದರೆ ಕಾನೂನಿನ ಬಗ್ಗೆ ಮಾಹಿತಿ ಇರಲಿಲ್ಲ. ಸಾರ್ವಜನಿಕ ವ್ಯಕ್ತಿಗಳಾಗಿ ನಾವು ನೀಡುವ ಸಂದೇಶದ ಹೊಣೆಗಾರಿಕೆ ಅರಿತುಕೊಂಡಿದ್ದೇವೆ. ಆದ್ದರಿಂದಲೇ ವಿಡಿಯೋ ಅಳಿಸಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಇಲಾಖೆಯ ನೋಟಿಸ್ ಬಳಿಕ ಇಬ್ಬರೂ ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ.
‘ಹೇ ನವಿಲೇ’ ಹಾಡಿಗೆ ಚಿತ್ರೀಕರಿಸಿದ್ದ ರೀಲ್ಸ್‌ನಲ್ಲಿ ನವಿಲು ಗರಿಗಳನ್ನು ಉಡುಪಿನ ಭಾಗವಾಗಿ ಬಳಸಲಾಗಿತ್ತು. ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಕುರಿತು ಸಾಮಾಜಿಕ ಕಾರ್ಯಕರ್ತರು ಹಾಗೂ ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಕರಣದ ಕುರಿತು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.



