ಖ್ಯಾತ ತಮಿಳು ನಟ ರೋಬೋ ಶಂಕರ್ ತಮ್ಮ 46ನೇ ವರ್ಷಕ್ಕೆ ವಿಧಿವಶರಾಗಿದ್ದಾರೆ.
ಅವರ ಸಾವು ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ರೋಬೋ ಶಂಕರ್ ಅವರಿಗೆ ಇತ್ತೀಚೆಗೆ ಆರೋಗ್ಯ ಕೈ ಕೊಟ್ಟಿತ್ತು. ಅವರು ಜಾಂಡೀಸ್ನಿಂದ ಬಳಲುತ್ತಿದ್ದರು. ವರ್ಷಗಳ ಹಿಂದೆಯೇ ಈ ರೋಗ ಕಾಣಿಸಿಕೊಂಡಿತ್ತು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಇದಕ್ಕಾಗಿ ಅವರು ಸಾಕಷ್ಟು ಸಿನಿಮಾಗಳನ್ನು ಕೂಡ ಬಿಟ್ಟಿದ್ದರು. ಜಾಂಡೀಸ್ನಿಂದ ಅವರು ಸಾಕಷ್ಟು ತೆಳ್ಳಗಾಗಿದ್ದರು.
ಇತ್ತೀಚೆಗೆ ಅವರು ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ರೋಬೋ ಶಂಕರ್ ಅವರು ಸೆಪ್ಟೆಂಬರ್ 16ರಂದು ಶೂಟಿಂಗ್ ಸೆಟ್ನಲ್ಲೇ ಮೂರ್ಚೆ ಹೋದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರಿಗೆ ಕರುಳಿನಲ್ಲಿ ರಕ್ತಸ್ರಾವ ಆಗಿತ್ತು ಎನ್ನಲಾಗಿದೆ. ಸತತ ಚಿಕಿತ್ಸೆಗಳ ಬಳಿಕವೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ವೈದ್ಯರು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅವರ ಸಾವಿಗೆ ನಟ ಕಮಲ್ ಹಾಸನ್, ರಾಧಿಕಾ ಶರತ್ಕುಮಾರ್, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.



