ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಜೈಲಿನಲ್ಲಿ ಕೊಡಬೇಕಾದ ಕನಿಷ್ಠ ಮೂಲಸೌಕರ್ಯಗಳನ್ನು ಕೊಟ್ಟಿಲ್ಲ ಎಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದು ಅದರ ವಿಚಾರಣೆ ಇಂದು ಸೆಷನ್ಸ್ ಕೋರ್ಟ್ ನಲ್ಲಿ ನಡೆದಿದೆ.
ದರ್ಶನ್ ಪರ ವಾದ ಮಂಡಿಸಿದ ವಕೀಲ ಸುನಿಲ್, ‘ಇಡೀ ದೇಶದ ಯಾವ ಜೈಲಿನಲ್ಲಿಯೂ ಇಲ್ಲದ ನಿಯಮಗಳನ್ನು ದರ್ಶನ್ ಮೇಲೆ ಹೇರಲಾಗಿದೆ. ಅದೇ ಜೈಲಿನಲ್ಲಿರುವ ಅತ್ಯಾಚಾರ ಆರೋಪಿ ಉಮೇಶ್ ರೆಡ್ಡಿಗೆ ಕಲರ್ ಟಿವಿ ಕೊಟ್ಟಿದ್ದಾರೆ, ಆದರೆ ದರ್ಶನ್ಗೆ ಅಗತ್ಯ ಸೌಲಭ್ಯಗಳನ್ನು ಸಹ ಕೊಡುತ್ತಿಲ್ಲ. ಬೇಕಾದರೆ ಆ ಬಗ್ಗೆ ಸಾಕ್ಷ್ಯ ನೀಡಲು ತಯಾರಿದ್ದೇವೆ’ ಎಂದು ವಾದಿಸಿದರು.
ಇನ್ನೂ ಜೈಲು ಅಧೀಕ್ಷಕರ ಪರ ವಾದಿಸಿದ ಎಸ್ಪಿಪಿ ಪ್ರಸನ್ನ ಅವರು, ‘ನಿಯಮಗಳ ಅನುಸಾರವಾಗಿ ದರ್ಶನ್ಗೆ ಏನು ಕೊಡಬೇಕೊ ಅದನ್ನು ಕೊಡಲಾಗಿದೆ. ಬೆಳಿಗ್ಗೆ, ಸಂಜೆ ವಾಕಿಂಗ್ಗೆ ಅವಕಾಶ ನೀಡಲಾಗಿದೆ. ಬಿಸಿಲು ಬರುವಲ್ಲಿ ಬ್ಯಾರಕ್ ಬೇಕು, ಮಲಗಲು ಪಲ್ಲಂಗ ಬೇಕು ಎಂದರೆ ಕೊಡಲಾಗುವುದಿಲ್ಲ. ನಿಯಮ ಇದೆ ಎಂದ ಮಾತ್ರಕ್ಕೆ ಇಲ್ಲದ್ದನ್ನೆಲ್ಲ ಕೇಳಲು ಆಗುವುದಿಲ್ಲ’ ಎಂದು ವಾದ ಮಂಡಿಸಿದರು.
ದರ್ಶನ್ ಪರ ವಕೀಲರ ಸುನಿಲ್ ವಾದಿಸಿ, ‘ಇತರೆ ಖೈದಿಗಳನ್ನು ಕೇವಲ 14 ದಿನಕ್ಕೆ ಕ್ವಾರಂಟೈನ್ ಬ್ಯಾರಕ್ನಿಂದ ಬೇರೆ ಬ್ಯಾರಕ್ಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ದರ್ಶನ್ ಅವರನ್ನು ಇನ್ನೂ ಕ್ವಾರಂಟೈನ್ ಬ್ಯಾರಕ್ನಲ್ಲಿಯೇ ಇರಿಸಲಾಗಿದೆ’ ಎಂದರು. ಎಸ್ಪಿಪಿ ಪ್ರತಿವಾದಿಸಿ, ‘ಕ್ಯಾರಂಟೈನ್ ಸೆಲ್ ಸಹ ಜೈಲಿನ ಭಾಗ. ಅಲ್ಲದೆ ಖೈದಿಗಳನ್ನು ಯಾರನ್ನು ಎಲ್ಲಿ ಇಡಬೇಕು ಎಂಬುದು ಜೈಲು ಅಧೀಕ್ಷಕರ ವಿವೇಚನೆಗೆ ಬಿಟ್ಟ ವಿಚಾರ. ಖೈದಿಗಳ ಭದ್ರತೆ ದೃಷ್ಟಿಯಿಂದ ಅವರನ್ನು ನಿಗದಿತ ಸೆಲ್ಗಳಲ್ಲಿ ಇಡಲಾಗುತ್ತದೆ’ ಎಂದರು.
ಸುನಿಲ್ ವಾದ ಮಂಡಿಸಿ, ‘ದರ್ಶನ್ ಅನ್ನು ಬೇರೆ ಬ್ಯಾರಕ್ಗೆ ಬಿಡಲು ಜೈಲಧಿಕಾರಿಗಳು ಹೆದರುತ್ತಿದ್ದಾರೆ. ಈ ಹಿಂದೆ ಅವರ ಲೋಪದಿಂದ ದರ್ಶನ್ ಫೋಟೊ ವೈರಲ್ ಆಗಿ ಅವರ ವಿರುದ್ಧವೇ ಎಫ್ಐಆರ್ ದಾಖಲಾಗಿತ್ತು. ಈ ಬೇರೆ ಬ್ಯಾರಕ್ಗೆ ವರ್ಗ ಮಾಡಿದರೆ, ಮತ್ತೆ ಅದೇ ಪುನರಾವರ್ತನೆ ಆಗುವ ಭಯ ಅವರಲ್ಲಿ ಕಾಡುತ್ತಿದೆ’ ಎಂದಿದ್ದಾರೆ ಸುನಿಲ್. ಇಂದು ನ್ಯಾಯಾಲಯದಲ್ಲಿ ಇಬ್ಬರು ವಕೀಲರ ನಡುವೆ ಏರಿದ ದನಿಯ ವಾದ-ಪ್ರತಿವಾದ ನಡೆಯಿತು. ಎಲ್ಲವನ್ನೂ ಆಲಿಸಿದ ನ್ಯಾಯಾಧೀಶರು ಅಕ್ಟೋಬರ್ 09ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.