ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿಯಲ್ಲಿ ಈಚೆಗೆ ನಡೆದ ಘಟನೆಗೂ ಎಸ್ಡಿಪಿಐಗೂ ಯಾವುದೇ ಸಂಬಂಧವಿಲ್ಲ. ಆದರೆ ಕೆಲ ಕೋಮವಾದಿ ಶಕ್ತಿಗಳು ವೈಯಕ್ತಿಕ ಜಗಳವನ್ನು ರಾಜಕೀಯಕ್ಕೆ ಬಳಸಿಕೊಕೊಂಡು ಎಸ್ಡಿಪಿಐ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಿಲಾಲ ಗೋಕಾವಿ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯಿಗೆ ಸಂಬಂಧಿಸಿದಂತೆ ಎರಡೂ ಸಮುದಾಯದ ಜನರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ವೈಯಕ್ತಿಕ ವಿಚಾರಕ್ಕೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಶಿರಹಟ್ಟಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಅಮಾಯಕರನ್ನು ಬಂಧಿಸಿ, ಕಿರುಕುಳ ನೀಡುವುದು ಬೇಡ. ಇನ್ನು ಶಿರಹಟ್ಟಿ ಶಾಸಕರು ಸಹ ಈ ವಿಚಾರದಲ್ಲಿ ರಾಜಕೀಯ ಮಾಡದೆ, ಸತ್ಯಾಸತ್ಯತೆ ಅರಿಯುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಮುಖಂಡರಾದ ಮಹಮ್ಮದ ಅಫಾನ್ ತರಫದಾರ, ಜಿಲಾನಿ ಮುಲ್ಲಾ, ಹಿದಾಯತುಲ್ಲಾ ಕಾಗದಗಾರ, ಅನ್ವರ ಮುಲ್ಲಾ, ಜಿಲಾನಿ ಲಕ್ಕುಂಡಿ ಇತರರು ಉಪಸ್ಥಿತರಿದ್ದರು.