ಬೆಂಗಳೂರು: ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದಿಗೆ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಶೇ. 33 ಅಂಕಗಳು ಸಾಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ನಿರ್ಧಾರವು ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಹೆಚ್ಚಿಸುವ ಮತ್ತು ಸಿಬಿಎಸ್‌ಇ ಹಾಗೂ ನೆರೆ ರಾಜ್ಯಗಳ ಏಕರೂಪ ಪದ್ಧತಿಯನ್ನು ರಾಜ್ಯದಲ್ಲಿ ಅಳವಡಿಸುವ ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ.
ಪಾಸಿಂಗ್ ಮಾರ್ಕ್ಸ್ ಕಡಿತ ಮಾಡುವ ವಿಚಾರವನ್ನು ಶಾಲಾ ಪರೀಕ್ಷಾ ಮಂಡಳಿ ಕರಡು ಅಧಿಸೂಚನೆ ಮೂಲಕ ಸಾರ್ವಜನಿಕ ಡೊಮೇನ್‌ಗೆ ಹಾಕಿ ಅಭಿಪ್ರಾಯ ಕೇಳಿತ್ತು. ಶೇ. 33ರಷ್ಟು ಅಂಕದ ಪರವಾಗಿ 701 ಪತ್ರಗಳು ಬಂದಿದ್ವು. ಆದರೆ, ಶೇ. 35 ಅಂಕ ಪರವಾಗಿ ಕೇವಲ 8 ಪತ್ರಗಳು ಬಂದಿದ್ದವು.
ಹೀಗಾಗಿ ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಿ 2025-26ನೇ ಸಾಲಿನಿಂದ ಶೇ. 33ರಷ್ಟು ಮಾನದಂಡವನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ, ಎಂದು ಸಚಿವರು ವಿವರಿಸಿದರು. ಪರೀಕ್ಷಾ ಅವ್ಯವಸ್ಥೆಯನ್ನು ಸುಧಾರಣೆ ತರುವುದು ಮುಖ್ಯವಾಗಿತ್ತು.
ಮಕ್ಕಳು ಬೇರೆ ವ್ಯವಸ್ಥೆಯಲ್ಲಿ ಪಾಸ್ ಆದ್ರೆ ಮುಂದೆ ತೊಂದರೆಯಾಗುತ್ತೆ. ಹೀಗಾಗಿ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಯಿತು. ಮೂರು ಬೋರ್ಡ್ ಪರೀಕ್ಷೆಗಳು ಉತ್ತಮ ಪರಿಣಾಮ ಬೀರಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಸಿಎಂ ನೀಡಿದ ಶೇ. 75ರಷ್ಟು ಗುರಿಯ ಬದಲಿಗೆ ಈ ವರ್ಷ ಶೇ. 79ರಷ್ಟು ತೇರ್ಗಡೆ ಪ್ರಮಾಣ ರೀಚ್ ಆಗಲು ಸಾಧ್ಯವಾಯಿತು. ವೆಬ್ ಕಾಸ್ಟಿಂಗ್‌ನಿಂದ ಪರೀಕ್ಷೆಗಳು ಕಟ್ಟುನಿಟ್ಟು ಆಗಿದ್ದು, ಯಾವುದೇ ಲೋಪದೋಷಗಳಿಲ್ಲದೆ ನಡೆದಿದೆ ಎಂದು ಸಚಿವರು ತಿಳಿಸಿದರು.