ಬೀದರ್: ಜಿಲ್ಲೆಯಲ್ಲಿ ಪೊಲೀಸರು ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು 45 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ.
ಮೊದಲ ಪ್ರಕರಣದಲ್ಲಿ, ಬೀದರ್ ನಗರದ ಕೆಇಬಿ ಫಂಕ್ಷನ್ ಹಾಲ್ ಬಳಿ ಒಬ್ಬ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಖಚಿತ ಮಾಹಿತಿ ಆಧಾರವಾಗಿ ದಾಳಿ ಮಾಡಿದ ಪೊಲೀಸರು ಸುಮಾರು ₹25 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎರಡನೇ ಪ್ರಕರಣದಲ್ಲಿ, ಮನ್ನಾಏಖೇಳಿಗೆ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಚಿಟ್ಟಗುಪ್ಪ ತಾಲೂಕಿನ ಮೀನಕೇರಾ ಕ್ರಾಸ್ ಬಳಿ ಪೊಲೀಸರು ತಡೆದಿದ್ದಾರೆ. ಅಲ್ಲಿ ₹20 ಲಕ್ಷ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಈ ವ್ಯಕ್ತಿಯನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಎರಡೂ ಕಾರ್ಯಾಚರಣೆಗಳು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ನಡೆದಿವೆ. ಗಾಂಧಿಗಂಜ್ ಮತ್ತು ಮನ್ನಾಏಖೇಳಿ ಪೊಲೀಸ್ ಠಾಣಾ ಅಧಿಕಾರಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು.



