ಬೆಳಗಾವಿ: ಬೆಳಗಾವಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಅನ್ನದಾತರು ನಡೆಸುತ್ತಿರುವ ಹೋರಾಟ ತೀವ್ರ ಸ್ಪರೂಪ ಪಡೆದುಕೊಂಡಿದೆ. ಹೋರಾಟದ ಕಾವು ಜೋರಾಗಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಕ್ರಾಸ್ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ನಾಲ್ಕು ಕೆಎಸ್ಆರ್ಟಿಸಿ ಬಸ್ಗಳ ಗಾಜು ಪುಡಿ ಆಗಿದೆ.
ಒಂದು ಗೂಡ್ಸ್ ವಾಹನಕ್ಕೂ ಕಲ್ಲು ತೂರಾಟ ಮಾಡಲಾಗಿದೆ. ಅಷ್ಟೇ ಅಲ್ಲದೆ ಪೊಲೀಸರ ಮೇಲೂ ಕಲ್ಲು ತೂರಲಾಗಿದೆ. ಅದರ ಜೊತೆಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹತ್ತರಗಿ ಬಳಿ ನಡೆಯುತ್ತಿದ್ದ ಧರಣಿ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಡಿವೈಎಸ್‌ಪಿ ಸಜ್ಜನ್ ಕೈ ಮುರಿದಿದೆ. ಕೂಡಲೇ ಅವರು ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಕೈಗೆ ಬ್ಯಾಂಡೇಜ್ ಹಾಕಿಸಿಕೊಂಡೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಹತ್ತರಗಿಯಲ್ಲಿ ಕಲ್ಲು ತೂರಾಟದಲ್ಲಿ 4 ಕೆಎಸ್ಆರ್ಟಿ ಬಸ್ ಹಾಗೂ ಲಾರಿಗಳ ಗಾಜು ಪುಡಿ ಪುಡಿಯಾಗಿದೆ. ಬಸ್ಗಳಿಗೆ ಹಾನಿಯಾಗಿರುವುದರಿಂದ ಸ್ಥಳಕ್ಕೆ ಕೆಎಸ್ಆರ್ಟಿಸಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಲಾರಿ ಸೇರಿದಂತೆ ಇತರೆ ವಾಹನಗಳಿಗೂ ಹಾನಿಯಾಗಿದೆ.
ಇನ್ನು ಕಲ್ಲು ತೂರಾಟ ನಡೆಸಿದ ಬಗ್ಗೆ ರೈತ ಮುಖಂಡರು ಪ್ರತಿಕ್ರಿಯಿಸಿ, ನಾವು ಶಾಂತಿಯೂತವಾಗಿ ಧರಣಿ ನಡೆಸುತ್ತಿದ್ದೇವೆ. ಯಾವೋ ಕಿಡಿಗೇಡಿಗಳು ಮಧ್ಯ ನುಸುಳಿ ಬಂದು ಕಲ್ಲು ತೂರಿದ್ದಾರೆ. ಈ ಮೂಲಕ ರೈತರ ಪ್ರತಿಭಟನೆ ದಿಕ್ಕು ತಪ್ಪಿಸಲು ಈ ಕೃತ್ಯ ಎಸಗಿದ್ದಾರೆ ಎಂದರು.


