ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಜುಗಲ್‌ಬಂಧಿ ಬಿಹಾರದಲ್ಲಿ ಮಹಾಘಟಬಂಧನ್ನನ್ನೇ ವೈಟ್‌ವಾಷ್ ಮಾಡಿದೆ. ಇದರ ಬೆನ್ನಲ್ಲೇ ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.
ರಾಹುಲ್ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಸುಮಾರು 30 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ಪುನರಚನೆ ಕುರಿತು ಚರ್ಚೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯಗೆ ಸಚಿವ ಕೆ.ಜೆ ಜಾರ್ಜ್ ಸಾಥ್ ನೀಡಿದ್ದಾರೆ.
ಇನ್ನೂ ಸಚಿವ ಸಂಪುಟ ಪುನರ್ ರಚನೆಗೆ ಒಪ್ಪಿಗೆ ನೀಡಬೇಕೆಂದು ಹೈಕಮ್ಯಾಂಡ್ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ-ಸಿಎಂ ಸಿದ್ದರಾಮಯ್ಯ ಭೇಟಿ ಅಂತ್ಯವಾದ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್ ಸಹ ದೆಹಲಿಗೆ ತೆರಳಿದ್ದು ಅವರು ಸಹ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ.



