ವಿಜಯಸಾಕ್ಷಿ ಸುದ್ದಿ, ಗದಗ: ಕನ್ಹೇರಿ ಮಠದ ಅದೃಶ್ಯಶ್ರೀ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಚೆನ್ನಮ್ಮ ಸರ್ಕಲ್‌ನಿಂದ ಆರಂಭವಾದ ಪಾದಯಾತ್ರೆ ಮುಳಗುಂದ ನಾಕಾ ಮಾರ್ಗವಾಗಿ ಡಿಸಿ ಕಛೇರಿ ತಲುಪಿ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಸಿ.ಸಿ ಪಾಟೀಲ ಮಾತನಾಡಿ, ಕಾಡಸಿದ್ದೇಶ್ವರ ಶ್ರೀಗಳು ರೈತರಿಗೆ ಸಾವಯವ ಕೃಷಿಯಲ್ಲಿ ಯಾವ ರೀತಿ ಸುಧಾರಣೆ ತರಬೇಕು ಎನ್ನುವುದನ್ನು ಹೇಳಿಕೊಡುತ್ತಾರೆ. ಗರ್ಭಿಣಿಯರಿಗೆ ಸಂಸ್ಕಾರದ ಪಾಠ, ಯುವಕರಿಗೆ ಸಂಸ್ಕೃತಿಯ ನೀತಿಪಾಠಗಳನ್ನು ಶ್ರೀಗಳು ಹೇಳುತ್ತಾರೆ. ಸರ್ಕಾರ ಮಾಡದ ಕೆಲಸಗಳನ್ನು ಶ್ರೀಗಳು ಮಾಡುತ್ತಿದ್ದಾರೆ. ಅವರು ಹಿಂದೂತ್ವವಾದಿ ಎನ್ನುವ ಒಂದೇ ಒಂದು ಕಾರಣಕ್ಕೆ ಅವರಿಗೆ ನಿರ್ಬಂಧ ಹೇರಿದ್ದು ಸರಿಯಲ್ಲ. ನೀವು ಅವರಿಗೆ ನಿರ್ಬಂಧ ಹೇರಿರಬಹುದು. ಆದರೆ, ಶ್ರೀಗಳು ಭಕ್ತರ ಮನಸ್ಸಿನಲ್ಲಿ ಅಚ್ಚರಿಯದೇ ಉಳಿದಿದ್ದಾರೆ. ಅವರ ಮೇಲೆ ಹೇರಿರುವ ನಿರ್ಬಂಧ ತೆರವುಗೊಳಿಸಿ ಮುಕ್ತ ವ್ಯವಸ್ಥೆ ಕಲ್ಪಿಸಬೇಕು. ದಬ್ಬಾಳಿಕೆಯಿಂದ ರಾಜ್ಯ ಆಳುವುದು ಸರಿಯಲ್ಲ. ಅಧಿಕಾರ ಶಾಶ್ವತವಲ್ಲ. ಮುಖ್ಯಮಂತ್ರಿಗಳೇ ನೀವು ಅವರ ಮಠಕ್ಕೆ ಒಮ್ಮೆ ಹೋಗಿ ನೋಡಿ. ಆಗ ನೀವು ಮಾಡುವುದು ತಪ್ಪು ಎಂದು ನಿಮಗೇ ಅನಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬುದ್ಧಿಮಾತು ಹೇಳಿದರು.
ಶ್ರೀ ಪ್ರಶಾಂತ ಮಹಾರಾಜರು ಮಾತನಾಡಿ, ಸನಾತನ ಧರ್ಮದ ರಕ್ಷಣೆಯನ್ನು ಕಾಡಸಿದ್ದೇಶ್ವರ ಶ್ರೀಗಳು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ನಿರ್ಬಂಧ ಹೇರಲಾಗುತ್ತಿದೆ. ಸ್ವಾಮೀಜಿಗಳಿಗೆ ನಿರ್ಬಂಧ ಹೇರುವ ದುಷ್ಟ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಹಿಂದೆ ನಮ್ಮನ್ನು ಹಲವು ದಶಕಗಳ ಕಾಲ ಆಳಿದ ಮೊಘಲರು, ಡಚ್‌ಕರು, ಪೋರ್ಚುಗೀಸರಿಗೆ ನಮ್ಮ ಧರ್ಮಕ್ಕೆ ಏನೂ ಮಾಡಲಾಗಲಿಲ್ಲ. ಕೇವಲ ಒಂದು ಕಾಂಗ್ರೆಸ್ ಸರ್ಕಾರ ಏನು ತಾನೇ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ವಿಜಯಪುರದ ಕೈವಲ್ಯಕುಟೀರ ಪ್ರಣವಪ್ರಕಾಶ ಮಹಾರಾಜರು, ಕನಕನಾಳದ ಗಿರೀಶಾನಂದ ಮಹಾರಾಜರು, ಹಂಸನೂರಿನ ಶ್ರೀ ಅಭಿನವ ಬಸವರಾಜೇಂದ್ರ ಸ್ವಾಮೀಜಿಗಳು, ಕನ್ನೂರಿನ ಗಿರಿಮಲ್ಲೇಶ್ವರ ಮಹಾರಾಜರು, ಕನ್ನೂರಿನ ಸದಾಶಿವ ಮಹಾರಾಜರು, ಸಿದ್ದಾಪೂರದ ಅರವಿಂದ ಮಹಾರಾಜರು, ಬಸವನಬಾಗೇವಾಡಿಯ ಅಭಯಾನಂದ ಮಹಾರಾಜರು, ಲಿಂಗದಾಳದ ಶ್ರೀ ಚೆನ್ನಮಲ್ಲಿಕಾರ್ಜುನ ಮಹಾರಾಜರು, ವಸಂತಗೌಡ ಪೊಲೀಸ್‌ಪಾಟೀಲ, ಪ್ರದೀಪ ನವಲಗುಂದ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಪ್ರಮುಖರಾದ ವಿಜಯಕುಮಾರ ಗಡ್ಡಿ, ಸುಧೀರ ಖಾಟಗೇರ, ರವಿ ವಗ್ಗಣ್ಣನವರ ಸೇರಿದಂತೆ ಶ್ರೀಗಳ ಭಕ್ತರು ಭಾಗವಹಿಸಿದ್ದರು.
ಪಾಕಿಸ್ತಾನ ಜಿಂದಾಬಾದ್ ಅಂದವರಿಗೆ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವರಿಗೆ ನಿರ್ಬಂಧವಿಲ್ಲ. ಆದರೆ, ಧರ್ಮ, ದೇಶ ರಕ್ಷಕರಿಗೆ ನಿರ್ಬಂಧ ಹೇರಿರುವುದು ಸರಿಯಲ್ಲ. ಹಿಂದೂತ್ವ ವಿರೋಧಿ ದೋರಣೆ ಅನುಸರಿಸಿದರೆ ಬಿಹಾರದಲ್ಲಿ ಕಾಂಗ್ರೆಸ್‌ಗೆ ಆದ ಪರಿಸ್ಥಿತಿ ರಾಜ್ಯದಲ್ಲಿಯೂ ಆಗಬಹುದು.
ರಾಘು ಯಳವತ್ತಿ,
ಕಾಡಸಿದ್ದೇಶ್ವರ ಶ್ರೀಗಳ ಭಕ್ತರು.



