ಬೀದರ್: ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರಿದ್ದ ಬಸ್ ಸೌದಿ ಅರೇಬಿಯಾದ ಮುಫ್ರಿಹತ್ ಬಳಿ ಸೋಮವಾರ ಮುಂಜಾನೆ ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 45 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿದ್ದರು.
ಈ ದುರಂತದಲ್ಲಿ ಕರ್ನಾಟಕದ ಬೀದರ್ ಮೂಲದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ವೃದ್ಧೆಯನ್ನು ಬೀದರ್ ಮೂಲದ ರಹಮತ್ ಬಿ (80) ಎಂದು ಗುರುತಿಸಲಾಗಿದೆ. ಬೀದರ್ ನಗರದ ಮೈಲೂರಿನ ಸಿಎಂಸಿ ಕಾಲೋನಿಯ ನಿವಾಸಿಯಾಗಿರುವ ಇವರು ನ.9ರಂದು ಬೀದರ್ನಿಂದ ಮೆಕ್ಕಾ ಹಾಗೂ ಮದೀನಾಗೆ ತೆರಳಿದ್ದರು.
ಬಸ್ ಅಪಘಾತದಲ್ಲಿ ವೃದ್ಧೆ ಸಜೀವ ದಹನವಾಗಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವೃದ್ಧೆ ಸಾವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಾಯಿಯ ನೆನೆದು ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದು, ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.



