ಗದಗ: ವಿದ್ಯುತ್ ಸಂಪರ್ಕ ಪಡೆಯಲು ಕ್ಲಿಯರೆನ್ಸ್ ಪ್ರಮಾಣಪತ್ರಕ್ಕಾಗಿ ಲಂಚ ಕೇಳಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಕೊಳಚೆ ನಿರ್ಮೂಲನಾ ಮಂಡಳಿಯ ಹೊರಗುತ್ತಿಗೆ ಕಂಪ್ಯೂಟರ್ ಆಪರೇಟರ್ ಗುರುನಾಥ ಕಮ್ಮಾರನ್ನು ಬಂಧಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿದ ಮನೆಗೆ ವಸತಿ ವಿದ್ಯುತ್ ಸಂಪರ್ಕ ಪಡೆಯಲು ಕ್ಲಿಯರೆನ್ಸ್ ಪ್ರಮಾಣಪತ್ರಕ್ಕಾಗಿ ₹1,000 ಲಂಚ ಕೇಳಿದ ಆರೋಪದ ಮೇಲೆ ಬಂಧಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಮೆಹಬೂಬ್ನಗರದ ಖಾಜಾಪಾಷಾ ಪತ್ನಿ ಶಕೀಲಾ ಬೇಗಂ ಅವರ ಹೆಸರಿನ 20×30 ಅಳತೆಯ ನಿವೇಶನ ಸಂಖ್ಯೆ 52ರಲ್ಲಿ ಪಿಎಂಎ ಯೋಜನೆಯಡಿ ಮನೆ ನಿರ್ಮಾಣವಾಗಿತ್ತು. ಮನೆ ಪೂರ್ಣಗೊಂಡ ನಂತರ, ವಾಣಿಜ್ಯ ವಿದ್ಯುತ್ ಸಂಪರ್ಕವನ್ನು ವಸತಿ ಸಂಪರ್ಕಕ್ಕೆ ಬದಲಾಯಿಸಲು ಕೊಳಗೇರಿ/ಕೊಳಚೆ ನಿರ್ಮೂಲನಾ ಮಂಡಳಿಯ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಿತ್ತು.
ನವೆಂಬರ್ 10, 2025ರಂದು ಖಾಜಾಪಾಷಾ ಕೊಪ್ಪಳದ ಕೊಳಗೇರಿ ಮಂಡಳಿ ಕಚೇರಿಗೆ ತೆರಳಿದಾಗ, “ಗದಗ–ಮುಳಗುಂದ ರಸ್ತೆಯಲ್ಲಿರುವ ಕಚೇರಿಗೆ ಹೋಗಿ” ಎಂದು ಸಿಬ್ಬಂದಿ ಸಲಹೆ ನೀಡಿದ್ದರು. ನವೆಂಬರ್ 11ರಂದು ಗದಗದ ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗೆ ತೆರಳಿ ಹೊರಗುತ್ತಿಗೆ ಸಿಬ್ಬಂದಿ ಕಂಪ್ಯೂಟರ್ ಆಪರೇಟರ್ ಗುರುನಾಥ ಕಮ್ಮಾರರನ್ನು ಭೇಟಿ ಮಾಡಿದಾಗ, ನೇರವಾಗಿ ₹1,000 ಲಂಚ ಕೇಳಿದ್ದರೆಂದು ದೂರು ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಖಾಜಾಪಾಷಾ ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದ ತಂಡವು ಗದಗದ ಕಚೇರಿಯಲ್ಲಿ ಬಲೆ ಬೀಸಿದ್ದರು. ಈ ವೇಳೆ ಗುರುನಾಥ ಕಮ್ಮಾರ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾರೆ.
ಇನ್ನೂ ಈ ಕಾರ್ಯಾಚರಣೆಯಲ್ಲಿ ಪಿಐ ಪರಮೇಶ್ವರ, ಜಿ. ಕವಟಗಿ, ಹೆಡ್ ಕಾನ್ಸ್ಟೇಬಲ್ಗಳು ವಿ.ಎಸ್. ದೀಪಾಲಿ, ಯು.ಎನ್. ಸಂಗನಾಳ, ಎನ್.ಪಿ. ಅಂಬಿಗೇರ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು. ಈ ಸಂಬಂಧ ಗದಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



