ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವೈಜ್ಞಾನಿಕ ತಳಹದಿಯ ಮೇಲೆ ರೂಪಗೊಂಡ ಅಷ್ಟಾವರಣಗಳನ್ನು ಆಚರಣೆ ಮಾಡುವುದರಿಂದ ವ್ಯಕ್ತಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆಂದು ಬಾಲೆಹೊಸೂರ-ಶಿರಹಟ್ಟಿ ಸಂಸ್ಥಾನ ಭಾವೈಕ್ಯತಾ ಮಹಾಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿ ಗ್ರಾಮದ ಪತ್ರವನ್ದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ 18ನೇ ಶಿವಾನುಭವ ಸಂಪದ ಹಾಗೂ ಕಾರ್ತಿಕೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮಾನವರೆಲ್ಲರೂ ಶಕ್ತಿ ಸ್ವರೂಪಿಗಳಾಗಿದ್ದಾರೆ. ಶಕ್ತಿ ಸ್ವರೂಪಿಗಳಾದ ನಾವು ಸನ್ಮಾರ್ಗದಲ್ಲಿ ನಡೆಯಲು ಅಷ್ಟಾವರಣಗಳ ಆಚರಣೆ ಮಹತ್ವದ್ದಾಗಿದೆ. ಇವುಗಳನ್ನು ಆಚರಿಸುವುದರಿಂದ ಶಕ್ತಿ ಸಂಚಲನವಾಗುವುದು. ಇವು ಭಕ್ತರನ್ನು ಬಾಹ್ಯ ಲೋಕದ ಆಕರ್ಷಣೆಗಳಿಂದ ರಕ್ಷಿಸುತ್ತವೆ ಮತ್ತು ಆಧ್ಯಾತ್ಮಿಕ ಮುಕ್ತಿಯ ಹಾದಿಯಲ್ಲಿ ಸಹಾಯ ಮಾಡುತ್ತವೆ ಎಂದರು.
ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವರಾಜ ಜಂಗಣ್ಣವರ, ಶರಣಪ್ಪ ಅರಮನಿ, ಎನ್. ವೀರಪ್ರಸಾದ ರೆಡ್ಡಿ, ಪ್ರಭು ಗದಗಿನ, ಡಿ.ಎಸ್. ಬಡಿಗೇರ, ಮಂಜುನಾಥ ಹುಯಿಲಗೋಳ, ಚೇತನ ಅಣಗೌಡ್ರ ಸೇರಿದಂತೆ ಇತರರು ಇದ್ದರು. ಎ.ಎಸ್. ಗೆದಿಗೇರಿ ನಿರ್ವಹಿಸಿದರು.



