ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇಶದ ಸಂವಿಧಾನದ ಪೀಠಿಕೆಯಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವದ ಹಿರಿಮೆ, ಶಕ್ತಿ ಹಾಗೂ ಅದರ ಶ್ರೇಷ್ಠ ಗುಣಗಳು ಅಡಗಿವೆ. ಸರ್ವಧರ್ಮಗಳಿಗೂ ಸಮಭಾವ ಎಂಬ ಸದಾಶಯ ಸಂವಿಧಾನದ ಮುಖ್ಯ ಧ್ಯೇಯವಾಗಿದೆ. ಭಾರತದ ಶ್ರೇಷ್ಠ ಪ್ರಜಾಪ್ರಭುತ್ವ ಕಟ್ಟುವಲ್ಲಿ ಮಕ್ಕಳು ಪಾಲುದಾರರಾಗಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಭರತ್ ಯೋಗೀಶ್ ಕರಗುದರಿ ಹೇಳಿದರು.
ಅವರು ತಾಲೂಕಿನ ಒಡೆಯರ ಮಲ್ಲಾಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನ ದೇಶದ ಮೂಲಭೂತ ಕಾನೂನುಗಳ ಗ್ರಂಥವಾಗಿದ್ದು, ನಾವೆಲ್ಲರೂ ಸಂವಿಧಾನದ ಹಕ್ಕುಗಳನ್ನು ಕೇಳುವಂತೆ ಕರ್ತವ್ಯಗಳನ್ನು ಪಾಲಿಸಬೇಕು. ನಮ್ಮ ಮುಂದಿನ ಪೀಳಿಗೆಯಾದ ನೀವು ಸಂವಿಧಾನ ನೀಡಿದ ಸ್ವಾತಂತ್ರ್ಯ, ಸಮಾನತೆಯನ್ನು ಬಳಸಿಕೊಂಡು ಭಾರತವನ್ನು ಶ್ರೇಷ್ಠ ಪ್ರಜಾಪ್ರಭುತ್ವವಾಗಿ ಕಟ್ಟುವಲ್ಲಿ ಪಾಲುದಾರರಾಗಬೇಕು ಎಂದು ಕರೆನೀಡಿದರು.
ಮುಖ‍್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದಿವಾಣಿ ನ್ಯಾಯಾಧೀಶ ಸತೀಶ್ ಎಂ ಮಾತನಾಡಿ, ಈ ಶಾಲೆಯ ಮಕ್ಕಳು ಸಂವಿಧಾನ ನೀಡಿದ ಗೌರವ ಮತ್ತು ಸ್ಥಾನಮಾನವನ್ನು ಬಳಸಿಕೊಂಡು ವಿವಿಧ ಗ್ರಾಮಗಳಿಂದ ಬಂದ ಮಕ್ಕಳು ತಮ್ಮ ಊರಿಗೆ ಮಾದರಿಯಾಗುವ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದರು.
ವಕೀಲರಾದ ಎನ್.ಸಿ. ಪಾಟೀಲ, ಎಂ.ಎ. ಹಾರೋಗೇರಿ ಸಂವಿಧಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಶಾಲೆಯ ಪ್ರಾಂಶುಪಾಲ ನಾಗರಾಜ ಕಳಸಾಪುರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಭರತ್ ಕರಗುದರಿ ಮತ್ತು ಸತೀಶ್ ಎಂ ನಡೆಸಿಕೊಟ್ಟರು.
ಎ.ಎ. ಬೇವಿನಗಿಡದ, ವಿಜಯಕುಮಾರ ಬಂಡಿ, ತಾಲೂಕು ಶಿಕ್ಷಣ ಇಲಾಖೆಯ ರಾಘವೇಂದ್ರ ಜೋಶಿ ಹಾಗೂ ಶಾಲೆಯ ಸಮಸ್ತ ಶಿಕ್ಷಕರು, ವಕೀಲರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಕಲಾ ಶಿಕ್ಷಕ ಪ್ರವೀಣ್ ಗಾಯಕರ್ ನಿರೂಪಿಸಿದರು, ಶಿಕ್ಷಕಿ ವೀಣಾ ಮಾಡಳ್ಳಿ ವಂದಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶದ್ವಯರು ಮೊರಾರ್ಜಿ ಶಾಲೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಶಾಲೆ, ಪ್ರಯೋಗಾಲಯ, ಭೋಜನಾಲಯಗಳನ್ನು ಖುದ್ದಾಗಿ ಪರೀಕ್ಷಿಸಿದರು.



