HomeGadag Newsರೈತರ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ

ರೈತರ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ 12ನೇ ದಿನ ಪೂರೈಸಿದ್ದು, 12ನೇ ದಿನದಂದು ನಾವೆಲ್ಲರೂ ಗೋವಿನ ಮೆಕ್ಕೆಜೋಳ ಬೆಳೆದು ಹಾನಿಗೊಳಗಾಗಿದ್ದೇವೆ ಎಂದು ತಮ್ಮ ತಮ್ಮ ಪಹಣಿ ಪತ್ರಿಕೆ (ಉತಾರ) ಪ್ರದರ್ಶಿಸುವ ಮೂಲಕ ರಸ್ತೆಯಲ್ಲಿ ನಿಂತು ಮತ್ತೊಂದು ರೀತಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಈ ವೇಳೆ ಮಾತನಾಡಿದ ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಮುಸ್ಲಿಂ ಸಮಾಜದ ಮುಖಂಡ ದಾದಾಪೀರ ಮುಚ್ಚಾಲೆ, ಹಸಿರು ಸೇನೆ ಅಧ್ಯಕ್ಷ ಜಾಯನಗೌಡ ಮಾತನಾಡಿ, ರೈತರು ಈ ದೇಶದ ಸಂಪತ್ತು. ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ, ಬೆಲೆ ಕುಸಿತ ಹೀಗೆ ಹತ್ತಾರು ಸಮಸ್ಯೆಗಳ ನಡುವೆ ಬೆವರು ಸುರಿಸಿ ದುಡಿಯುವ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು. ರೈತರ ಹೋರಾಟಕ್ಕೆ ಸ್ಪಂದಿಸಲಾಗಿದೆ ಎಂದು ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವ ಆಶ್ವಾಸನೆ ಹಾಗೆಯೇ ಉಳಿಯಬಾರದು. ಕೂಡಲೇ ಹಾಳಾಗುತ್ತಿರುವ ಗೋವಿನ ಮೆಕ್ಕೆಜೋಳವನ್ನು ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ರೈತರ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.

ನಮ್ಮ ನಡುವೆ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಜನರ ನೋವಿಗೆ ಸ್ಪಂದಿಸುತ್ತಿದ್ದ ಹಾಗೂ ರೈತರ ಮತ್ತು ಬಡವರ ಪಾಲಿಗೆ ದಾರಿದೀಪವಾಗಿದ್ದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಅಕಾಲಿಕ ಸಾವು ಇಡೀ ನಾಡಿಗೆ ಬರಸಿಡಿಲಿನಂತೆ ಬಂದೆರಗಿದೆ. ಇಂತಹ ವ್ಯಕ್ತಿಯನ್ನು ಕಳೆದುಕೊಂಡ ಆ ಕುಟುಂಬದ ನೋವಿನಲ್ಲಿ ರೈತ ಸಮುದಾಯವಿದೆ. ಭಗವಂತ ಅವರ ಅಗಲುವಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರತಿಭಟನಾಕಾರರು ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ನಿಧನಕ್ಕೆ ರೈತರು ಶ್ರದ್ಧಾಂಜಲಿ ಸಲ್ಲಿಸಿದರು.
ಹೋರಾಟದಲ್ಲಿ ಎಂ.ಎಂ ಗದಗ, ಪ್ರಕಾಶ ಅಂಗಡಿ, ಕೃಷ್ಣಪ್ಪ ಲಮಾಣಿ, ಶರಣು ಗೋಡಿ, ಮಲ್ಲೇಶ ಅಂಕಲಿ, ಪರಮೇಶ ಹಂಗನಕಟ್ಟಿ, ಶಿವಪುತ್ರಪ್ಪ ತಾರಿಕೊಪ್ಪ, ಬಸವರಾಜ ಹಿರೇಮನಿ ಸೇರಿದಂತೆ ಅನೇಕರಿದ್ದರು.

ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಎಂ.ಎಸ್. ದೊಡ್ಡಗೌಡರ, ಹೊನ್ನಪ್ಪ ವಡ್ಡರ, ನಾಗರಾಜ ಚಿಂಚಲಿ, ನೀಲಪ್ಪ ಶರಸೂರಿ ಮಾತನಾಡಿ, ನ್ಯಾಯಯುತ ಬೇಡಿಕೆಗಾಗಿ ಕಳೆದ 12 ದಿನಗಳಿಂದ ರೈತರು ಶಾಂತಿ, ಸಮಾಧಾನದಿಂದ ವಿನೂತನ ರೀತಿಯಿಂದ ಹೋರಾಟ ಮಾಡುತ್ತಿದ್ದೇವೆ. ಕಳೆದ 6 ದಿನಗಳ ಹಿಂದೆ ಸರಕಾರ ಬೆಂಬಲ ಬೆಲೆ ಕೇಂದ್ರ ಪ್ರಾರಂಭಿಸುವ ಭರವಸೆ ನೀಡಿದ್ದರಿಂದ ರೈತರಿಗೆ ನೆಮ್ಮದಿಯಾಗಿದೆ. ಆದರೆ ಇದು ಮೂಗಿಗೆ ತುಪ್ಪ ಒರೆಸುವ ಕಾರ್ಯವಾಗಬಾರದು. ರೈತರ ಒಕ್ಕೊರಲಿನ ಕೂಗು, ಹೋರಾಟಕ್ಕೆ 2/3 ದಿನಗಳಲ್ಲಿ ಸ್ಪಂದಿಸದಿದ್ದರೆ ಹೋರಾಟದ ಸ್ವರೂಪ ಮತ್ತೆ ತೀವ್ರತೆ ಪಡೆದುಕೊಳ್ಳಲಿದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!